ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2025 ಕೊನೆಯ ಹಂತ ತಲುಪಿದೆ. ಲೀಗ್ ಪಂದ್ಯಗಳೆಲ್ಲ ನಿನ್ನೆಗೆ (ಫೆಬ್ರವರಿ 23) ಮುಗಿದಿದ್ದು ಮುಂದಿನ ವೀಕೆಂಡ್‌ನಲ್ಲಿ ಸೆಮಿ ಫೈನಲ್ ಹಾಗೂ ಫೈನಲ್ ಪಂಧ್ಯಗಳು ಆರಂಭ ಆಗಲಿವೆ. ಈಗಾಗಲೇ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶ ಮಾಡಿವೆ. ಹೀಗಾಗಿ ಎರಡು ಸೆಮಿ ಫೈನಲ್ ಪಂದ್ಯಗಳನ್ನು ರೋಚಕವಾಗಿರುತ್ತೆ ಅಂತ ನಿರೀಕ್ಷೆ ಮಾಡಬಹುದು.
ಎಲ್ಲಕ್ಕಿಂತ ಹೆಚ್ಚಾಗಿ ಈ ಬಾರಿ ಸಿಸಿಎಲ್ 2025ರ ಸೆಮಿ ಫೈನಲ್ ಪಂದ್ಯಗಳು ಅರಮನೆ ನಗರಿ ಮೈಸೂರಿನಲ್ಲಿ ನಡೆಯುತ್ತಿವೆ. ಎರಡು ಸೆಮಿ ಫೈನಲ್ ಹಾಗೂ ಒಂದು ಫೈನಲ್ ಪಂದ್ಯವನ್ನು ಮೈಸೂರಿನ ಜನರು ವೀಕೆಂಡ್‌ನಲ್ಲಿ ವೀಕ್ಷಣೆ ಮಾಡುವುದಕ್ಕೆ ಇದು ಒಳ್ಳೆಯ ಚಾನ್ಸ್. ಕರ್ನಾಟಕ ಬುಲ್ಡೋಜರ್ಸ್, ಬೆಂಗಾಲ್ ಟೈಗರ್ಸ್, ಚೆನ್ನೈ ರೈನೋಸ್ ಹಾಗೂ ಪಂಜಾಬ್ ದೆ ಶೇರ್ ಪಂದ್ಯಗಳು ಸೆಮಿ ಫೈನಲ್ ಪ್ರವೇಶ ಮಾಡಿವೆ.
ಲೀಗ್ ಹಂತದ ಮ್ಯಾಚ್‌ಗಳನ್ನು ಈ ನಾಲ್ಕೂ ತಂಡಗಳು ಅದ್ಭುತವಾಗಿ ಆಡಿದ್ದವು. ಸೋಲಿಲ್ಲದೆ ಮುನ್ನುಗ್ಗುತ್ತಿದ್ದ ಕರ್ನಾಟಕ ಬುಲ್ಡೋಜರ್ಸ್‌ಗೆ ಪಂಜಾಬ್ ದೆ ಶೇರ್ ಮೊದಲ ಸೋಲಿನ ರುಚಿ ತೋರಿಸಿದ್ದರು. ಇತ್ತ ಬೆಂಗಾಲ್ ಟೈಗರ್ಸ್ ಒಂದೇ ಒಂದು ಪಂದ್ಯ ಸೋಲದೆ ಟಾಪ್ ಲಿಸ್ಟ್‌ನಲ್ಲಿ ಇದ್ದಾರೆ. ಹಾಗಿದ್ದರೆ, ಸೆಮಿ ಫೈನಲ್‌ನಲ್ಲಿ ಯಾವ ತಂಡ ಯಾವ ಟೀಮ್ ಜೊತೆ ಸೆಣೆಸಾಡುತ್ತಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
ನಿನ್ನೆ ಸೂರತ್‌ನಲ್ಲಿ ಎರಡು ಪಂದ್ಯಗಳು ನಡೆದಿದ್ದವು. ಅಷ್ಟೊತ್ತಿಗಾಗಲೇ ನಾಲ್ಕು ತಂಡಗಳು ಸೆಮಿ ಫೈನಲ್ ಪ್ರವೇಶಿಸಿದ್ದವು. ಆದರೂ, ಫೆಬ್ರವರಿ 23ರಂದು ನಡೆದ ಕೊನೆಯ ಪಂದ್ಯ ಸೆಮಿ ಫೈನಲ್‌ನಲ್ಲಿ ಯಾವ ತಂಡ ಯಾರೊಂದಿಗೆ ಸೆಣೆಸಾಡಲಿದೆ ಅನ್ನೋದನ್ನು ನಿರ್ಣಯ ಮಾಡುತ್ತಿತ್ತು. ಪಂಜಾಬ್ ದೆ ಶೇರ್ ಹಾಗೂ ಮುಂಬೈ ಹೀರೋಸ್ ನಡುವೆ ಪಂದ್ಯದಲ್ಲಿ ಪಂಜಾಬ್ ಗೆದ್ದಿದ್ದರೆ ಪಾಯಿಂಟ್ಸ್ ಟೇಬಲ್‌ನಲ್ಲಿ ಹಿಂದೆ ಮುಂದೆ ಆಗುತ್ತಿತ್ತು. ಕರ್ನಾಟಕ ಬುಲ್ಡೋಜರ್ಸ್ ವಿರುದ್ಧ ಸೆಮಿಫೈನಲ್ ಪಂದ್ಯ ಆಡಬೇಕಿತ್ತು. ಆದರೆ ಹಾಗಲಿಲ್ಲ. ಲೀಗ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ವಿರುದ್ಧ ಪಂಜಾಬ್ ದೆ ಶೇರ್ ತಗಾದೆ ತೆಗೆದು ಗಲಾಟೆ ಮಾಡಿಕೊಂಡಿತ್ತು. ಕಿಚ್ಚನ ಮಧ್ಯ ಪ್ರವೇಶದಿಂದ ಕಿತ್ತಾಟಕ್ಕೆ ಬ್ರೇಕ್ ಬಿದ್ದಿದ್ದರೂ ಕರ್ನಾಟಕ ಬುಲ್ಡೋಜರ್ಸ್ ತಂಡ ಪಂಜಾಬ್ ವಿರುದ್ಧ ಎರಡು ರನ್‌ಗಳಿಂದ ಸೋಲಬೇಕಾಯ್ತು. ಹೀಗಾಗಿ ನಿನ್ನೆ (ಫೆಬ್ರವರಿ 23) ಸೂರತ್‌ನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಪಂಜಾಬ್ ಗೆದ್ದಿದ್ದರೆ ಸೆಮಿ ಫೈನಲ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಎದುರು ಆಡಬೇಕಿತ್ತು. ಆದರೆ, ಪಂಜಾಬ್ ಸೋತು ಬೆಂಗಾಲ್ ಟೈಗರ್ಸ್ ವಿರುದ್ಧ ಸೆಣಸಾಡಬೇಕಿದೆ. ಇನ್ನು ಸೆಮಿಫೈನಲ್ಸ್ ಪ್ರವೇಶಿಸಿರುವ ನಾಲ್ಕು ತಂಡಗಳ ಪಟ್ಟಿ ಹೀಗಿದೆ.
ಸೆಮಿ ಫೈನಲ್ ಪ್ರವೇಶಿಸಿದ ತಂಡಗಳು ಬೆಂಗಾಲ್ ಟೈಗರ್ಸ್ 4 ಪಂದ್ಯ 4 ಗೆಲುವು 0 ಸೋಲು ಕರ್ನಾಟಕ ಬುಲ್ಡೋಜರ್ಸ್ 4 ಪಂದ್ಯ 3 ಗೆಲುವು 1 ಸೋಲು ಚೆನ್ನೈ ರೈನೋಸ್ 4 ಪಂದ್ಯ 2 ಗೆಲುವು 2 ಸೋಲು ಪಂಜಾಬ್ ದೆ ಶೇರ್ 4 ಪಂದ್ಯ 2 ಗೆಲುವು 2 ಸೋಲು ಈ ನಾಲ್ಕು ತಂಡಗಳು ಮೈಸೂರಿನಲ್ಲಿ ಸೆಮಿ ಫೈನಲ್ ಪಂದ್ಯಗಳನ್ನು ಆಡಲಿವೆ. ಸಿಸಿಎಲ್ ನಿಯಮಗಳ ಪ್ರಕಾರ, ಪಾಯಿಂಟ್ಸ್ ಟೇಬಲ್‌ನಲ್ಲಿ ಮೊದಲ ಸ್ಥಾನದಲ್ಲಿರುವ ತಂಡ ನಾಲ್ಕನೇ ಸ್ಥಾನದಲ್ಲಿರುವ ತಂಡದ ಜೊತೆ ಸೆಣೆಸಾಡಲಿದೆ. ಹಾಗೇ ಎರಡನೇ ಸ್ಥಾನದಲ್ಲಿರುವ ತಂಡ ಮೂರನೇ ಸ್ಥಾನದಲ್ಲಿರುವ ತಂಡದ ಜೊತೆ ಸೆಣೆಸಾಡಲಿದೆ. ಹೀಗಾಗಿ ಕರ್ನಾಟಕ ಬುಲ್ಡೋಜರ್ಸ್ ತಂಡ ಚೆನ್ನೈ ರೈನೋಸ್ ಜೊತೆ ಹಾಗೂ ಬೆಂಗಾಲ್ ಟೈಗರ್ಸ್ ತಂಡ ಪಂಜಾಬ್ ದೆ ಶೇರ್ ಜೊತೆ ಸೆಮಿ ಫೈನಲ್ ಪಂದ್ಯವನ್ನು ಮಾರ್ಚ್ 1 ರಂದು ಆಡಲಿದೆ.