ಯಾದಗಿರಿ: ಫೆ:27: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆ ಕಾಯಿದೆ- 2013ರ ಕುರಿತು ಅರಿವು ಮೂಡಿಸುವ ಜೊತೆಗೆ, ಪ್ರತಿಯೊಂದು ಇಲಾಖೆ ವ್ಯಾಪ್ತಿಯಲ್ಲಿ 300 ಕ್ಕೂ ಹೆಚ್ಚು ಆಂತರಿಕ ದೂರು ಸಮಿತಿಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ.ಬಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಸಮನ್ವಯ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮಿಷನ್ ಶಕ್ತಿ ಯೋಜನೆ ಅಡಿ ಬೇಟಿ ಬಚಾವೋ ,ಬೇಟಿ ಪಡಾವೋ ಯೋಜನೆ ಹಾಗೂ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆ ಕಾಯ್ದೆ- 2013 ಹಾಗೂ ಆಂತರಿಕ ದೂರು ಸಮಿತಿ ಕುರಿತು ಎಲ್ಲಾ ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಏರ್ಪಡಿಸಲಾಗಿದ್ದ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಪ್ರತಿ ಇಲಾಖೆಯಲ್ಲಿ 10 ಅಥವಾ ಹತ್ತಕ್ಕಿಂತ ಹೆಚ್ಚು ಸಿಬ್ಬಂದಿ ಇರುವ ಕಚೇರಿಗಳಲ್ಲಿ ಆಂತರಿಕ ದೂರು ಸಮಿತಿಗಳನ್ನು ರಚಿಸಿ ಜಿಲ್ಲಾ ಮಟ್ಟದಲ್ಲಿಯೂ ಸಮಿತಿಯನ್ನು ರಚಿಸಲಾಗಿದೆ. ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ರಕ್ಷಣೆ ಒದಗಿಸುವ ದಿಶೆಯಲ್ಲಿ ಈ ಸಮಿತಿಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲೆಯ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚು ಆಂತರಿಕ ದೂರು ಸಮಿತಿಗಳನ್ನು ರಚಿಸಲಾಗಿದೆ. ಮಹಿಳೆಯರಿಗೆ ರಕ್ಷಣೆ ಒದಗಿಸುವುದು ಕಾಯ್ದೆಯ ಮುಖ್ಯ ಉದ್ದೇಶವಾಗಿರುವುದರಿಂದ ದೂರು ಬಂದ ಸಂದರ್ಭದಲ್ಲಿ ಪಾರದರ್ಶಕವಾಗಿ ಪರಿಶೀಲನೆ ಆಗಬೇಕು. ಅದರಂತೆ ಸುಳ್ಳು ದೂರುಗಳ ಬಗ್ಗೆಯೂ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವಂತೆಯೂ ಅಧಿಕಾರಿಗಳಿಗೆ ಅವರು ತಿಳಿಸಿದರು.
ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳಬೇಕು. ಮೇಲಾಧಿಕಾರಿಗಳಿಂದ ಕೆಳ ವರ್ಗದ ಸಿಬ್ಬಂದಿಗಳವರೆಗೆ ಪರಸ್ಪರ ಸಹಬಾಳ್ವೆಯೊಂದಿಗೆ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು. ಲೈಂಗಿಕ ದೂರುಗಳು ಬಂದ ಸಂದರ್ಭದಲ್ಲಿ ಅಧಿಕಾರಿಗಳು ಕಾಲಕಾಲಕ್ಕೆ ಪರಿಶೀಲನೆ ನಡೆಸಿ ಸರಿಯಾಗಿ ಇತ್ಯರ್ಥ ಪಡಿಸುವಂತೆಯು ಅವರು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಮರಿಯಪ್ಪ ಅವರು, ಮಹಿಳಾ ಸುರಕ್ಷತಾ ಹಾಗೂ
ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗಳ ಬಗ್ಗೆ ಪ್ರತಿ ಮಹಿಳೆಯರಿಗೆ ಅರಿವು ಇರಬೇಕು. ಪುರುಷ ಪ್ರಧಾನ ಸಮಾಜದಲ್ಲಿ ತಮ್ಮನ್ನು ತಾವು ಸಂರಕ್ಷಿಸುವಂತಹ ಕಾಯ್ದೆಗಳ ಬಗ್ಗೆ ಜ್ಞಾನ ಹೊಂದಬೇಕು. ಮಹಿಳೆಯರು ಶೋಷಣೆಯ ವಸ್ತುಗಳಲ್ಲ ಎಂಬುದರ ಬಗ್ಗೆ ತಮ್ಮನ್ನು ತಾವು ಅರಿತುಕೊಂಡಾಗ ಮಾತ್ರ ದೌರ್ಜನ್ಯ ನಿಯಂತ್ರಣ ಸಾಧ್ಯ. ಮಹಿಳೆಯರು ದೌರ್ಜನ್ಯ ಮೆಟ್ಟಿ ನಿಲ್ಲಲು ಮಹಿಳಾ ಸುರಕ್ಷತಾ ಕಾನೂನುಗಳ ಬಗ್ಗೆ ಜ್ಞಾನ ಹೊಂದುವಂತೆ ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ್ ಬಿರಾದಾರ್ ಅವರು ಸರ್ಕಾರವು ಮಹಿಳೆಯರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಮುಂಚೂಣಿಗೆ ತರಲು ಅವಕಾಶ ಕಲ್ಪಿಸುತ್ತಿದ್ದು, ಮಹಿಳಾ ಸಬಲತೆಗೆ ಒತ್ತು ನೀಡುತ್ತಿದೆ. ಮಹಿಳಾ ಸುರಕ್ಷತಾ ಕಾಯ್ದೆಗಳು, ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಸಹ ಜಾರಿಯಲ್ಲಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಕಲ್ಬುರ್ಗಿ, ಸಿದ್ದಾರ್ಥ ಕಾನೂನು ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಸ್ ಚಂದ್ರಶೇಖರ್ ಅವರು ಮಾತನಾಡಿದರು.
ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ವೀರಣಗೌಡ ಅವರು, ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದ ಅನ್ವಯ ಜಿಲ್ಲಾ, ತಾಲೂಕ ಹಾಗೂ ಗ್ರಾಮ ಮಟ್ಟಗಳವರೆಗೆ ವಿವಿಧ ಇಲಾಖೆಗಳಲ್ಲಿ ಸುಮಾರು 314 ಕ್ಕೂ ಹೆಚ್ಚು ಆಂತರಿಕ ದೂರು ಸಮಿತಿಗಳನ್ನು ರಚಿಸಲಾಗಿದೆ. ಈ ದೂರು ಸಮಿತಿ ಕರ್ತವ್ಯಗಳ ಬಗ್ಗೆ ತಿಳಿಹೇಳಲು ಕಾರ್ಯಾಗಾರ ಏರ್ಪಡಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಧರ್ನೇಶ್.ಎಸ್, ಡಿ ಡಿ ಪಿ ಐ ಚನ್ನಬಸಪ್ಪ ಮುಧೋಳ, ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರೇಮ್ ಮೂರ್ತಿ ವಂದಿಸಿದರು.
