ಬಳ್ಳಾರಿ,ಫೆ.26:
ಸಂಡೂರಿನ ತೋರಣಗಲ್ಲು ಬಳಿಯ ಜಿಂದಾಲ್ ನಲ್ಲಿ ಫೆ.20, 21, 22 ಮೂರು ದಿನಗಳ ಕಾಲ ಜರುಗಿದ ಬೃಹತ್ ರಕ್ತದಾನ ಶಿಬಿರವು ಯಶಸ್ವಿಯಾಗಿದ್ದು, ಒಟ್ಟು 5034 ಯುನಿಟ್ ರಕ್ತ ಸಂಗ್ರಹಿಸುವ ಮೂಲಕ ನೂತನ ದಾಖಲೆಯಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಅವರು ತಿಳಿಸಿದ್ದಾರೆ.
ಬೃಹತ್ ರಕ್ತದಾನ ಶಿಬಿರದ ಯಶಸ್ವಿ ಕುರಿತು ಮಾತನಾಡಿದ ಅವರು, ರಕ್ತದ ಅವಶ್ಯಕತೆ ಇರುವ ಜನತೆಗೆ ರಕ್ತದ ಲಭ್ಯತೆಯನ್ನು ಎಲ್ಲ ರಕ್ತಭಂಡಾರಗಳಲ್ಲಿ ಇರುವಂತೆ ನೋಡಿಕೊಳ್ಳಲು ಸಹಕಾರಿಯಾಗುವ ದಿಶೆಯಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಇತರರಿಗೆ ಪ್ರೇರಣೆ ನೀಡಲು ಸಾಕ್ಷಿಯಾದ ರಕ್ತದಾನಿಗಳಿಗೆ ಹಾಗೂ ಜಿಲ್ಲೆಯಲ್ಲಿ ರಕ್ತದ ಕೊರತೆ ನೀಗಿಸುವ ಪ್ರಯತ್ನಕ್ಕೆ ಕೈಜೋಡಿಸಿದ ಪ್ರತಿಯೊಬ್ಬರೂ ಜಿಲ್ಲಾಡಳಿತದಿಂದ ಅಭಿನಂದನೆ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕದ ಸಹಕಾರದೊಂದಿಗೆ ಜೆಎಸ್‌ಡಬ್ಲ್ಯು ಫೌಂಡೇಶನ್, ಜಿಂದಾಲ್ ಸ್ಟಿಲ್ ಇವರ ಸಂಪೂರ್ಣ ಬೆಂಬಲದೊಂದಿಗೆ ಫೆ.20 ರಿಂದ 22 ರವರೆಗೆ ಮೂರು ದಿನಗಳ ಕಾಲ 5000 ಯುನಿಟ್ (5000 ಜನರಿಂದ ರಕ್ತ ಸಂಗ್ರಹ) ರಕ್ತ ಸಂಗ್ರಹದ ಗುರಿ ಹೊಂದಲಾಗಿತ್ತು.
ಜಿಂದಾಲ್ ನ ಅಧಿಕಾರಿಗಳು, ಸಿಬ್ಬಂದಿಯವರು, ಫೌಂಡೇಷನ್‌ನೊಂದಿಗೆ ಕಾರ್ಯ ನಿರ್ವಹಿಸುವ ಜನರು ಸುತ್ತ-ಮುತ್ತಲಿನ ಗ್ರಾಮಗಳ ಜನರ ಸ್ವಯಂಪ್ರೇರಿತರಾಗಿ ಮುಂದೆ ಬಂದು ರಕ್ತದಾನ ಮಾಡಿದ್ದು, ಪ್ರಯತ್ನ ಮಾಡಿದರೆ ಸಾಧನೆ ಸಾಧ್ಯವೆಂಬುದಕ್ಕೆ ಮೊದಲ ದಿನ 1454, ಎರಡನೆಯ ದಿನ 1377, ಮೂರನೆಯ ದಿನ 2203 ಯುನಿಟ್ ಸಂಗ್ರಹಿಸಿರುವುದು ಸಾಕ್ಷಿಯಾಗಿದೆ ಎಂದರು.
ಇಂತಹ ಬೃಹತ್ ಗುರಿಯನ್ನು ಸವಾಲಾಗಿ ಸ್ವೀಕರಿಸಿದ ಜಿಂದಾಲ್ ಸ್ಟೀಲ್‌ನ ಪ್ರೆಸಿಡೆಂಟ್ ಪಿ.ಕೆ ಮುರುಗನ್, ಹಿರಿಯ ಉಪಾಧ್ಯಕ್ಷ (ಆಡಳಿತ) ಸುನೀಲ್ ರಾಲ್ಫ್, ಸಿಎಸ್‌ಆರ್ ಮುಖ್ಯಸ್ಥ ಪೆದ್ದಣ್ಣ, ಸಂಜೀವಿನಿ ಆಸ್ಪತ್ರೆ ಮುಖ್ಯಸ್ಥ ಡಾ.ಸನ್ನಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಹಾಗೂ ಡ್ಯಾಪ್ಕೋ ಅಧಿಕಾರಿ ಡಾ.ಇಂದ್ರಾಣಿ ಹಾಗೂ ಅವರ ತಂಡ ಮತ್ತು 20 ಜನ ವೈದ್ಯರು, 200 ತಂತ್ರಜ್ಞರೊಂದಿಗೆ ಶ್ರಮಿಸಿದ 9 ರಕ್ತಭಂಡಾರದವರಿಗೂ ಅಭಿನಂದನೆ ತಿಳಿಸಿದ್ದಾರೆ.







Users Today : 1
Users Yesterday : 3
Users Last 7 days : 38