Zerodha Founder Nithin Kamath : ದೇಶೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕರೆಕ್ಷನ್ ಶುರುವಾಗಿದ್ದು, ಬಿಎಸ್‌ಇ ಸೆನ್ಸೆಕ್ಸ್ ಫೆಬ್ರವರಿ ತಿಂಗಳಿನಲ್ಲಿ ಬರೋಬ್ಬರಿ 4000 ಪಾಯಿಂಟ್ಸ್ ನಷ್ಟಗೊಂಡಿದೆ. ಷೇರುಗಳ ಮೌಲ್ಯದಲ್ಲಿ ಭಾರೀ ನಷ್ಟದ ಪರಿಣಾಮ ಬಿಎಸ್‌ಇ ಮಾರ್ಕೆಟ್ ಕ್ಯಾಪ್ 40 ಲಕ್ಷ ಕೋಟಿ ರೂಪಾಯಿ ಕರಗಿದೆ. ಹೀಗಿರುವಾಗ ಜೆರೋಧಾ ಸಂಸ್ಥಾಪಕ ನಿತಿನ್ ಕಾಮತ್ ಮಾರುಕಟ್ಟೆಯ ಈಗಿನ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ.
ಭಾರತದ ಷೇರು ಮಾರುಕಟ್ಟೆ ದಿನೇ ದಿನೇ ಹೆಚ್ಚು ಕುಸಿಯತೊಡಗಿದ್ದು, ಫೆಬ್ರವರಿಯಲ್ಲಂತೂ ದೊಡ್ಡ ಕುಸಿತ ಕಂಡಿದೆ. ಸೆನ್ಸೆಕ್ಸ್ 4,000 ಪಾಯಿಂಟ್‌ಗಳಿಗಿಂತ ಹೆಚ್ಚು ಕಡಿಮೆಯಾಗಿ 5% ನಷ್ಟ ಅನುಭವಿಸಿದೆ. BSE ಪಟ್ಟಿ ಮಾಡಲಾದ ಕಂಪನಿಗಳ ಮಾರುಕಟ್ಟೆ ಬಂಡವಾಳದಿಂದ 40 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಕಡಿಮೆಯಾಗಿದೆ.
ಸೆನ್ಸೆಕ್ಸ್ ಅಷ್ಟೇ ಅಲ್ಲದೆ ನಿಫ್ಟಿ 50 ಕೂಡ ಭಾರಿ ಹೊಡೆತ ಅನುಭವಿಸಿದ್ದು, ಸತತ ಐದನೇ ತಿಂಗಳು ನಷ್ಟ ಅನುಭವಿಸಿದೆ. 1996 ರಲ್ಲಿ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಇಷ್ಟು ದೀರ್ಘ ನಷ್ಟದ ಸರಣಿ ಕಂಡಿದೆ. ಈ ಕುಸಿತ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಬರೋಬ್ಬರಿ 28 ವರ್ಷಗಳ ಬಳಿಕ ನಿಫ್ಟಿ50 ದೊಡ್ಡ ಕುಸಿತ ಕಂಡಿದೆ.
ಷೇರುಪೇಟೆ ಇನ್ನೆಷ್ಟು ಕುಸಿಯಲಿದೆ ಎಂದು ತನಗೆ ತಿಳಿದಿಲ್ಲ ಎಂದ ನಿತಿನ್ ಕಾಮತ್!
ಜೆರೋಧಾ ಸಂಸ್ಥಾಪಕ ಮತ್ತು CEO ನಿತಿನ್ ಕಾಮತ್ ಟ್ವಿಟ್ಟರ್‌ನಲ್ಲಿ ಮಾರುಕಟ್ಟೆಯಲ್ಲಿ ಆಗಿರುವ ರಕ್ತದೋಕುಳಿ ಬಗ್ಗೆ ಮಾತನಾಡಿದ್ದಾರೆ.
“ಮಾರುಕಟ್ಟೆಗಳು ಅಂತಿಮವಾಗಿ ಕರೆಕ್ಷನ್ ಮಾಡಿಕೊಳ್ಳುತ್ತಿವೆ. ಮಾರುಕಟ್ಟೆಗಳು ತೀವ್ರ ಏರಿಳಿತಗಳನ್ನು ಕಾಣುತ್ತವೆ. ಅವು ಏರಿದಂತೆಯೇ ಬೀಳಬಹುದು. ಮಾರುಕಟ್ಟೆಗಳು ಎಲ್ಲಿಗೆ ಹೋಗುತ್ತವೆ ಎಂದು ನನಗೆ ತಿಳಿದಿಲ್ಲ. ಆದರೆ ಬ್ರೋಕಿಂಗ್ ಉದ್ಯಮದ ಬಗ್ಗೆ ನಾನು ನಿಮಗೆ ಹೇಳಬಲ್ಲೆ. ವ್ಯಾಪಾರಿಗಳ ಸಂಖ್ಯೆ ಮತ್ತು ವಹಿವಾಟು ಎರಡರಲ್ಲೂ ಭಾರಿ ಕುಸಿತ ಕಾಣುತ್ತಿದ್ದೇವೆ.
ಇಲ್ಲಿದೆ ವಹಿವಾಟಿನ ಚಾರ್ಟ್. ಎಲ್ಲಾ ಬ್ರೋಕರ್‌ಗಳಲ್ಲಿ 30% ಕ್ಕಿಂತ ಹೆಚ್ಚು ಚಟುವಟಿಕೆ ಕುಸಿತ ಕಂಡಿದೆ. ಮಾರುಕಟ್ಟೆಗೆ ನಿಜವಾದ ವೃತ್ತಾಕಾರದ ಜೊತೆಗೆ, 15 ವರ್ಷಗಳ ಹಿಂದೆ ನಾವು ಪ್ರಾರಂಭಿಸಿದಾಗಿನಿಂದ ಮೊದಲ ಬಾರಿಗೆ ವ್ಯವಹಾರದಲ್ಲಿ ಕುಸಿತವನ್ನು ಕಾಣುತ್ತಿದ್ದೇವೆ. ಈ ವಹಿವಾಟು ಕುಸಿತ ಭಾರತೀಯ ಮಾರುಕಟ್ಟೆಗಳು ಇನ್ನೂ ಎಷ್ಟು ಆಳವಿದೆ ಎಂಬುದನ್ನು ತೋರಿಸುತ್ತದೆ.
ಈ ಗ್ರಾಫ್‌ನ ಚಟುವಟಿಕೆಯು ಗಮನಿಸಿದ್ರೆ ಹೆಚ್ಚು ಕಡಿಮೆ ಆ 1-2 ಕೋಟಿ ಭಾರತೀಯರಲ್ಲಿ ಮಾತ್ರ ಇದೆ. ಇದು ಮುಂದುವರಿದರೆ, ಸರ್ಕಾರ 2025/26 ರಲ್ಲಿ STT ಯಿಂದ 40,000 ಕೋಟಿ ರೂ. ಗಳಿಸುವುದಿಲ್ಲ. 80,000 ಕೋಟಿ ರೂ. ಅಂದಾಜಿಗಿಂತ ಕನಿಷ್ಠ 50% ಕಡಿಮೆ.” ಎಂದು ನಿತಿನ್ ಕಾಮತ್ ಎರಡು ಚಾರ್ಟ್‌ಗಳನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ಕುಸಿತ ಅಂತಿಮ ಹಂತವಾಗಿರಬಹುದು!
ಆದರೆ, ಹೂಡಿಕೆದಾರರು ಭಯ ಪಡಬೇಕಿಲ್ಲ. ಮಾರುಕಟ್ಟೆ ಸಲಹಾ ಕಂಪನಿ ಮೆರಿಸಿಸ್ ಪ್ರಕಾರ, ಈ ಕುಸಿತವು ಅಂತಿಮ ಹಂತವಾಗಿರಬಹುದು. ಮುಂದಿನ 4-6 ವಾರಗಳಲ್ಲಿ ಬಲವಾದ ತಿರುವು ಜರುಗಬಹುದು. ಜೆಫರೀಸ್‌ನ ಜಾಗತಿಕ ಷೇರು ತಂತ್ರಜ್ಞ ಕ್ರಿಸ್ ವುಡ್ ಹೇಳುವಂತೆ, ಈ ಮಾರುಕಟ್ಟೆ ತಿದ್ದುಪಡಿ ಮುಖ್ಯವಾಗಿ ತಾಂತ್ರಿಕ ಸ್ವರೂಪದ್ದಾಗಿದೆ. “GREED & fear ನ ಮೂಲ ಪ್ರಕರಣವೆಂದರೆ, ಷೇರು ಮಾರುಕಟ್ಟೆಯು ಸರಿಯಾಗಿ ತಿದ್ದುಪಡಿ ಮಾಡಲು ಪ್ರಾರಂಭಿಸಿದ ನಂತರ ಮೊದಲ ಬಾರಿಗೆ, ಮಾರಾಟವು ಪ್ರಾಥಮಿಕವಾಗಿ ತಾಂತ್ರಿಕ ಸ್ವರೂಪದ್ದಾಗಿದೆ ಎಂದು ವುಡ್ GREED & fear ಸುದ್ದಿಪತ್ರದಲ್ಲಿ ಬರೆದಿದ್ದಾರೆ.
ಶುಕ್ರವಾರ 1414 ಪಾಯಿಂಟ್ಸ್ ಕುಸಿದ ಸೆನ್ಸೆಕ್ಸ್ ಭಾರತೀಯ ಷೇರು ಮಾರುಕಟ್ಟೆ ಶುಕ್ರವಾರ (ಫೆ.28) ಭಾರೀ ಕುಸಿತಕ್ಕೆ ಸಾಕ್ಷಿಯಾಗಿದ್ದು, ದಲಾಲ್ ಸ್ಟ್ರೀಲ್‌ನಲ್ಲಿ ರಕ್ತದೋಕುಳಿಯೇ ಹರಿದು ಹೋಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 1414 ಪಾಯಿಂಟ್ಸ್ ನೆಲಕಚ್ಚಿದ್ದು, ನಿಫ್ಟಿ ಸೂಚ್ಯಂಕವು 22125 ಮಾರ್ಕ್‌ಗಿಂತ ಕೆಳಕ್ಕೆ ಇಳಿದಿದೆ. ಬಹುತೇಕ ಎಲ್ಲಾ ವಲಯಗಳ ರೆಡ್ ಮಾರ್ಕ್‌ನಲ್ಲಿ ಮುಚ್ಚಿವೆ.