ಬೆಂಗಳೂರು,
ಈಗಾಗಲೇ ಮೆಣಸಿನಕಾಯಿ ಬೆಂಬಲ ಬೆಲೆಗಾಗಿ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ್ ಪಾಟೀಲ್ ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಸೇರಿದಂತೆ ಅಧಿಕಾರಿಗಳೊಂದಿಗೆ ನಾನು ಹಾಗೂ ರಾಯಚೂರು ಲೋಕಸಭಾ ಸಂಸದರಾದ ಜಿ ಕುಮಾರ್ ನಾಯಕ ಅವರು ಮಾತನಾಡಿದ್ದೇವೆ. ಶೀಘ್ರ ಕ್ಯಾಬಿನೆಟ್ ಉಪ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿ ಕೃಷಿ ಸಚಿವರೊಂದಿಗೆ ಮಾತನಾಡಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮೆಣಸಿನಕಾಯಿ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಿ ರೈತರನ್ನು ನಷ್ಟದಿಂದ ಪಾರು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ತಿಳಿಸಿದರು.
ವಿಧಾನಸೌಧದ ಸಚಿವರ ಕಾರ್ಯಾಲಯದಲ್ಲಿ ರಾಯಚೂರು ಜಿಲ್ಲಾ ಕೋಲ್ಡ್ ಸ್ಟೋರೇಜ್ ಮಾಲೀಕರ ನಿಯೋಗ ಹಾಗೂ ರೈತರು ಭೇಟಿ ಮಾಡಿ ರೈತರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ರಾಯಚೂರು ಲೋಕಸಭಾ ಸಂಸದರಾದ ಜಿ ಕುಮಾರ್ ನಾಯಕ್ ಹಾಗೂ ಸಚಿವರೊಂದಿಗೆ ಚರ್ಚಿಸಿದರು.
ರಾಜ್ಯದಾದ್ಯಂತ ಮೆಣಸಿನಕಾಯಿ ಬೆಳೆ ಬೆಳೆದ ರೈತರಿಗೆ ಸೂಕ್ತ ಬೆಲೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಯಚೂರು, ಯಾದಗಿರಿ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ರೈತರು ಮೆಣಸಿನಕಾಯಿಯನ್ನು ಯಥೇಚ್ಛವಾಗಿ ಬೆಳೆಯುತ್ತಿದ್ದು, ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಬೆಂಬಲ ಬೆಲೆಯಲ್ಲಿ ಮೆಣಸಿನಕಾಯಿಯನ್ನು ಖರೀದಿಸಬೇಕೆಂದು ರಾಯಚೂರು ಜಿಲ್ಲಾ ಕೋಲ್ಡ್ ಸ್ಟೋರೇಜ್ ಮಾಲಿಕರ ನಿಯೋಗ ಹಾಗೂ ರೈತರು ಮನವಿ ಮಾಡಿದರು.
ಕೊಪ್ಪಳ ಬಳ್ಳಾರಿ ರಾಯಚೂರು ಯಾದಗಿರಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೆಣಸಿನಕಾಯಿ ಬೆಳೆಯ ಮೇಲೆ ರೈತರು ಅವಲಂಬನೆಯಾಗಿದ್ದಾರೆ. ಒಟ್ಟಾರೆಯಾಗಿ ರಾಜ್ಯದಲ್ಲಿಯೇ ಅತಿ ಹೆಚ್ಚು ಬೆಳೆಯನ್ನು ತುಂಗಭದ್ರ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಹಾಗೂ ಯಾದಗಿರಿಯಲ್ಲಿ ರೈತರು ಮೆಣಸಿನಕಾಯಿ ಬೆಳೆಯನ್ನು ಬೆಳೆಯುತ್ತಿದ್ದಾರೆ.
ಕರ್ನಾಟಕ ಕೋಲ್ಡ್ ಸ್ಟೋರೇಜ್ ಗಳಲ್ಲಿ ಕಳೆದ ವರ್ಷದ ಮೆಣಸಿನ ಕಾಯಿಗಳನ್ನು ರೈತರು ಸಂಗ್ರಹಿಸಿದ್ದಾರೆ. ಈ ವರ್ಷದ ಬೆಳೆಯೂ ಕೈಗೆ ಬಂದುತ್ತಿರುವುದರಿಂದ ಹಿಂದೆಂದು ಅನುಭವಿಸದ ನಷ್ಟವನ್ನು ರೈತರು ಬೆಂಬಲ ಬೆಲೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಮಾರುಕಟ್ಟೆ ಹಸ್ತಕ್ಷೇಪ ಯೋಜನೆ ಜಾರಿಗೆ ತರಲು ಹಾಗೂ ಮೆಣಸಿನಕಾಯಿ ಬೆಳೆಗೆ ಬೆಂಬಲ ಬೆಲೆ ನೀಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ಕೋರ್ಟ್ ಸ್ಟೋರೇಜ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರಾದ ವೆಂಕಟರಾವ್, ಮುಖಂಡರಾದ ರವಿ ಪಾಟೀಲ್, ಗೌರವ ಅಧ್ಯಕ್ಷರಾದ ನಾಗನಗೌಡ, ಕಾರ್ಯದರ್ಶಿಗಳಾದ ದಿನೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
