ಭಾರತೀಯ ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿಯ ಊಟದ ವರೆಗೂ ಹತ್ತಾರು ಮಸಾಲೆಗಳು ಆಹಾರದಲ್ಲಿ ಸೇರಿರುತ್ತವೆ. ಅರಿಶಿಣ, ಲವಂಗ, ಏಲಕ್ಕಿಯಂತಹ ಪದಾರ್ಥಗಳು ಆರೋಗ್ಯಕರ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಇವುಗಳ ಬಳಕೆ ಹೆಚ್ಚು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಪದಾರ್ಥವೂ ಕಳಬೆರಕೆಯಾಗುತ್ತಿದೆ. ಸೊಪ್ಪು ತರಕಾರಿಯನ್ನು ಕೊಳಚೆ ನೀರಿನಲ್ಲಿ ಬೆಳೆಸಲಾಗುತ್ತಿದೆ. ಮಸಾಲೆ ಪದಾರ್ಥಗಳಲ್ಲಿ ಮಾರಕ ರಾಸಾಯನಿಕ ವಸ್ತುಗಳನ್ನು ಮಿಶ್ರಣ ಮಾಡಲಾಗುತ್ತಿದೆ. ಈ ಬಗ್ಗೆ ವರದಿ ಇಲ್ಲಿದೆ.
ಅಡುಗೆ ಮನೆಯಲ್ಲಿ ಬಳಸುವ ಸಾಂಬಾರು ಮಸಾಲೆ ಪದಾರ್ಥಗಳ ಕಲಬೆರಕೆಯು ಆರೋಗ್ಯದ ಮೇಲೆ ನೇರ, ಗಂಭೀರ ಮತ್ತು ಅಪಾಯಕಾರಿ ಪರಿಣಾಮ ಬೀರುತ್ತಿದೆ. ಬಳಕೆದಾರರ ಹಿತದೃಷ್ಟಿಯಿಂದ ಅದನ್ನು ಪತ್ತೆ ಹಚ್ಚುವುದು ಅತಿ ಮುಖ್ಯವಾಗಿದೆ. ಪುರಾತನವಾಗಿ ಭಾರತ ದೇಶವು ಮಸಾಲೆ ಪದಾರ್ಥಗಳ ಕಣಜ. ಶತ ಶತಮಾನಗಳಿಂದಲೂ ಮಸಾಲೆ ಪದಾರ್ಥಗಳ ಕೃಷಿ ಮತ್ತು ವ್ಯಾಪಾರದ ಅಗ್ರ ಕೇಂದ್ರವಾಗಿದೆ. ಅರಿಶಿನ, ಮೆಣಸಿನ ಪುಡಿ, ಜೀರಿಗೆ, ಕೊತ್ತಂಬರಿ ಬೀಜ ಇನ್ನೂ ಅನೇಕ ಸುವಾಸನೆಭರಿತ/ ರುಚಿಕರ/ಆರೋಗ್ಯಕರ ಪದಾರ್ಥಗಳು ಪಾಕಶಾಲೆಯ ಪ್ರಧಾನ ಪದಾರ್ಥಗಳಾಗಿವೆ. ಇದು ಎಲ್ಲರಿಗೂ ಚೆನ್ನಾಗಿ ವೇದ್ಯವಾಗಿದೆ.
ಶತಮಾನಗಳಿಂದಲೂ ಭಾರತದ ರಫ್ತು ಬುಟ್ಟಿಯಲ್ಲಿ ಆಹಾರ ಮಸಾಲೆಗಳು ಅತ್ಯಗತ್ಯ ಅಂಶವಾಗಿ ಭದ್ರವಾಗಿ ಕುಳಿತಿದೆ. ಶತಮಾನಗಳ ಹಿಂದೆ ಪೋರ್ಚುಗೀಸ್ ದೇಶದ ನಾವಿಕ ವಾಸ್ಕೋ ಡಿ ಗಾಮಾ ಭಾರತಕ್ಕೆ ಬಂದಿದ್ದ ದಿನಗಳಲ್ಲಿ ಇಲ್ಲಿಂದ ಕಾಳುಮೆಣಸಿನ ಚೀಲವನ್ನು ಖರೀದಿಸಲು ತನ್ನಲ್ಲಿದ್ದ ಎಲ್ಲವನ್ನೂ ಮಾರಾಟ ಮಾಡಬೇಕಾಯಿತು ಎಂಬ ಮಾತಿದೆ. ಅಂದರೆ ಇಲ್ಲಿನ ಮಸಾಲೆ ಪದಾರ್ಥಗಳ ರುಚಿ, ಮಹತ್ವ ಅಷ್ಟಿತ್ತು ಎನ್ನಬಹುದು. ಜೊತೆಗೆ ನಮ್ಮ ಭಾರತೀಯ ಮಸಾಲೆಗಳಲ್ಲಿರುವ ಔಷಧೀಯ ಗುಣವನ್ನು ವಿವಿಧ ವೈಜ್ಞಾನಿಕ ಅಧ್ಯಯನಗಳು ಪದೇ ಪದೇ ಸಾಬೀತುಪಡಿಸಿವೆ.
ಭಾರತದ ಮಸಾಲೆ ಪದಾರ್ಥಗಳ ರುಚಿ, ಮಹತ್ವ ಇಂದಿಗೂ ಕುಂದಿಲ್ಲ. ಹಾಗೆಯೇ ಉಳಿದಿದೆ. ಆದರೆ ಬೇಡಿಕೆ ಹೆಚ್ಚಾಗಿ ಆ ಮಸಾಲೆ ಪದಾರ್ಥಗಳಲ್ಲಿ ಕಲಬೆರಕೆ ಎಂಬ ಪೆಡಂಭೂತ ವ್ಯಾಪಕ ಸಮಸ್ಯೆಯಾಗಿ ಕಾಡತೊಡಗಿದೆ. ಮುಖ್ಯವಾಗಿ ಇದು ಗ್ರಾಹಕರ ಆರೋಗ್ಯ ಮತ್ತು ಈ ಉದ್ಯಮದ ಸಮಗ್ರತೆಗೆ ಬೆದರಿಕೆ ಒಡ್ಡುತ್ತಿದೆ.
ಭಾರತದ ಮಸಾಲೆ ಪದಾರ್ಥಗಳ ಹೆಚ್ಚಿನ ಬೇಡಿಕೆ ಮತ್ತು ಮೌಲ್ಯದಿಂದಾಗಿಯೇ ಈ ಮಸಾಲೆ ಪದಾರ್ಥಗಳು ಕಲಬೆರಕೆಗೆ ಗುರಿಯಾಗುತ್ತಿವೆ. ಸಾಮಾನ್ಯವಾಗಿ ಕಲಬೆರಕೆಗಳಲ್ಲಿ ಕೃತಕ ಬಣ್ಣಗಳು ಮತ್ತು ಮರದ ಪುಡಿ ಅಥವಾ ಇಟ್ಟಿಗೆ ಪುಡಿಯಂತಹ ಅಗ್ಗದ ಪದಾರ್ಥಗಳನ್ನು ಬದಲಿಯಾಗಿ ಸೇರಿಸಲಾಗುತ್ತೆ. ಇವುಗಳಿಂದ ಆರೋಗ್ಯ ಸಮಸ್ಯೆ ಕಟ್ಟಿಟ್ಟಬುತ್ತಿ.