ಕಲಬುರಗಿ,ಫೆ.27: ವರ್ಷದ ಹಿಂದೆ ಶಾಲೆಯ ವಾಹನ ಚಾಲಕ 6ನೇ ತರಗತಿ ವಿದ್ಯಾರ್ಥಿನಿಗೆ ಅನುಚಿತ ವರ್ತನೆ ಆರೋಪದ ಸಂಬAಧ ದಾಖಲಾದ ಪೋಕ್ಸೋ ಪ್ರಕರಣ ಕುರಿತಂತೆ ವಿಚಾರಿಸಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣಗೌಡ ಕೆ. ಅವರು ಗುರುವಾರ ಸೇಡಂ ರಸ್ತೆಯಲ್ಲಿನ ಎಸ್.ಆರ್.ಎನ್.ಮೆಹತಾ (ಸಿ.ಬಿ.ಎಸ್.ಇ ) ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಶಾಲೆಯ ಆಡಳಿತ ಮಂಡಳಿ ಚಕುರ್ ಮೆಹತಾ ಮತ್ತು ಪ್ರಾಂಶುಪಾಲ ರಾಜಶೇಖರ ರೆಡ್ಡಿ ಅವರೊಂದಿಗೆ ಪೋಕ್ಸೋ ಪ್ರಕರಣದ ಜೊತೆಗೆ ಶಾಲೆಯಲ್ಲಿ ದಾಖಲಾದ ಮಕ್ಕಳ ಸಂಖ್ಯೆ, ಮಕ್ಕಳ ರಕ್ಷಣೆಗೆ ತೆಗೆದುಕೊಂಡ ಕ್ರಮದ ಬಗ್ಗೆ ಚರ್ಚಿಸಿದ ಅವರು, ಪ್ರಕರಣದ ನಂತರ ಶಾಲಾ ಅಡಳಿತ ಮಂಡಳಿಯು ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳು ಕುರಿತು ಮಾಹಿತಿ ಪಡೆದರು.
ನಂತರ ಮಕ್ಕಳ ತರಗತಿ ಕೋಣೆ ವೀಕ್ಷಿಸಿದ ಅಧ್ಯಕ್ಷರು, ಮಕ್ಕಳೊಂದಿಗೆ ಸಂವಾದ ನಡೆಸಿದರು. ಶಾಲೆಯಲ್ಲಿನ ಸಮಸ್ಯೆ ಕುರಿತು ಮಕ್ಕಳಿಗೆ ಬರೆಯಲು ತಿಳಿಸಿದಾಗ ಕುಡಿಯುವ ನೀರು, ಶೌಚಾಲಯ ಸಮಸ್ಯೆಗಳಿವೆ ಎಂದು ಮಕ್ಕಳು ತಿಳಿಸಿದರು.
ಮಕ್ಕಳ ಹಕ್ಕುಗಳ ರಕ್ಷಣೆ ನಿಟ್ಟಿನಲ್ಲಿ ರಾಜ್ಯ ಸರ್ಕಾರ 2016ರಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ ಕಾಯ್ದೆ ಜಾರಿಗೆ ತಂದಿದ್ದು, 100 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿದಲ್ಲಿ ಇದನ್ನು ಜಾರಿಗೆ ತರುವುದು ಕಡ್ಡಾಯವಾಗಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಒಳ್ಳೆ ಆಟ, ಊಟ, ಪಾಠ ಮೂರು ಅಗತ್ಯವಾಗಿವೆ. 3,000 ಮಕ್ಕಳಿರುವ ಈ ಶಾಲೆಯಲ್ಲಿ ಎಲ್ಲಿಯೂ ಮಕ್ಕಳ ಆಟವಾಡುತಿಲ್ವಲಾ ಎಂದು ಪ್ರಶ್ನಿಸಿದ ಅವರು, ಮೂಲಸೌಕರ್ಯ ಮಾಡಿದರೆ ಸಾಲದು, ಅದನ್ನು ಸಮರ್ಪಕವಾಗಿ ಬಳಸಬೇಕು ಎಂದರು.
ಮಕ್ಕಳ ಕಲ್ಯಾಣ ಸಮಿತಿ ರಚಿಸಲು ಸೂಚನೆ: ಎಸ್.ಆರ್.ಎನ್. ಮೆಹತಾ ಶಾಲೆಯಲ್ಲಿ ಚೈಲ್ಡ್ ಲೈನ್ ಸಂಖ್ಯೆ 1098, ತುರ್ತು ಸ್ಪಂದನೆಯ 112 ಸಂಖ್ಯೆ ಶಾಲಾ ಆವರಣದ ಗೋಡೆಗಳ ಮೇಲೆ ಬರೆಯಿದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷರು, ಪೋಕ್ಸೋ ಪ್ರಕರಣ ದಾಖಲಾದ ಮೇಲೂ ಶಾಲೆ ಎಚ್ಚೆತ್ತುಕೊಳ್ಳದಿದ್ದರೆ ಹೆಂಗೆ? ಎಂದು ಅಡಳಿತ ಮಂಡಳಿಗೆ ಪ್ರಶ್ನಿಸಿದ ಅವರು, ಹೆಣ್ಣು ಮಕ್ಕಳ ರಕ್ಷಣೆಗೆ ಮಹಿಳಾ ಸಿಬ್ಬಂದಿಯನ್ನು ನೇಮಿಸಿದಲ್ಲಿ ಇಂತಹ ಘಟನೆ ನಡೆಯಲ್ಲ ಎಂದ ಅಧ್ಯಕ್ಷರು, ಒಂದು ವಾರದಲ್ಲಿ ಮಕ್ಕಳ ಕಲ್ಯಾಣ ಸಮಿತಿ ರಚಿಸಬೇಕು. ಪ್ರತಿ ಮಾಹೆ ಮಕ್ಕಳ ಸಭೆ ಕರೆದು ಅವರ ಸಮಸ್ಯೆ ಆಲಿಸಿ ಬಗೆಹರಿಸಬೇಕೆಂದು ಶಾಲೆಗೆ ಖಡಕ್ ಸೂಚನೆ ನೀಡಿದರು.
ಶಾಲೆಗೆ ಅನುಮತಿ ನೀಡುವಾಗ ನವೀಕರಿಸುವಾಗ ಮಕ್ಕಳ ರಕ್ಷಣಾ ನಿತಿಯನ್ವಯ ಕ್ರಮಗಳನ್ನು ತೆಗೆದುಕೊಂಡಿರುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಪರಿಶಿಲಿಸಬೇಕು. ಷರತ್ತು ಪೂರೈಸದಿದ್ದರೆ ಅಂತಹ ಶಾಲೆಗೆ ಅನುಮತಿ ನಿರಾಕರಿಸಬೇಕು ಎಂದ ಅವರು, ಇನ್ನು ಮೆಹತಾ ಶಾಲೆಯಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚಿಸಿರುವ ಕುರಿತು ಒಂದು ವಾರದೊಳಗೆ ಆಯೋಗಕ್ಕೆ ವರದಿ ಸಲ್ಲಿಸುವಂತೆ ಬಿ.ಇ.ಓ ವಿಜಯಕುಮಾರ ಅವರಿಗೆ ನಿರ್ದೇಶನ ನೀಡಿದರು.
ಮಾದಕ ವಸ್ತುಗಳು ಮಾರಾಟವಾಗದಂತೆ ಎಚ್ಚರ ವಹಿಸಿ: ಶಾಲಾ ಆವರಣದ ಸುತ್ತ ಪಾನಿಪುರಿ, ಹಣ್ಣು ಮಾರಾಟ ಮಾಡುವರು, ತಿಂಡಿ ತಿನುಸುಗಳ ಮಾರಾಟ ಮಾಡುವವರ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಬೇಕು. ಇಲ್ಲಿ ಮಕ್ಕಳಿಗೆ ಮಾದಕ ವಸ್ತುಗಳ ಪೂರೈಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಗುಲಬರ್ಗಾ ವಿ.ವಿ. ಪಿ.ಎಸ್.ಐ ರೇಣುಕಾದೇವಿ ಅವರಿಗೆ ಸೂಚಿಸಿದ ಅಧ್ಯಕ್ಷ ನಾಗಣಗೌಡ ಕೆ. ಅವರು, ಪೋಕ್ಸೋ ಪ್ರಕರಣ ಫಾಲೋ ಅಪ್ ಮಾಡಬೇಕು. ಮಕ್ಕಳ ವಿಷಯಕ್ಕೆ ಸಂಬAಧಿಸಿದAತೆ ದಾಖಲಾಗುವ ಪ್ರಕರಣಗಳ ಕುರಿತು ತ್ವರಿತವಾಗಿ ಸ್ಪಂದಿಸಬೇಕು ಎಂದು ಪೊಲೀಸರಿಗೆ ನಿರ್ದೇಶನ ನೀಡಿದರು.
ಆರ್ಯನ್ ಶಾಲೆಗೂ ಭೇಟಿ: ನಂತರ ಅಧ್ಯಕ್ಷ ನಾಗಣಗೌಡ ಕೆ. ಅವರು ರಿಂಗ್ ರಸ್ತೆಯಲ್ಲಿ ಆರ್ಯನ್ ಪಿ.ಯು. ಕಾಲೇಜು ಮತ್ತು ಆರ್ಯನ್ ಇಂಟನ್ಯಾಷನಲ್ ಸ್ಕೂಲ್ (ಸಿ.ಬಿ.ಎಸ್.ಇ) ಶಾಲೆಗೆ ಭೇಟಿ ನೀಡಿ ಚೈಲ್ಡ್ ಲೈನ್ ಸಂಖ್ಯೆ 1098, ತುರ್ತು ಸ್ಪಂದನೆಯ 112 ಸಂಖ್ಯೆ ಶಾಲಾ ಆವರಣದ ಗೋಡೆಗಳ ಮೇಲೆ ಬರೆಯುವಂತೆ ತಿಳಿಸಿ ಮಕ್ಕಳ ರಕ್ಷಣಾ ಸಮಿತಿ ರಚಿಸುವಂತೆ ತಿಳಿಸಿದರು. ಕಾಲೇಜಿನ ವಿಜಯ ಸಿಂಗ್ ಠಾಕೂರ, ಶಾಲೆಯ ಉಪ ಪ್ರಾಂಶುಪಾಲರಾದ ಶೋಭಾ ಪಾಟೀಲ ಇದ್ದರು.
ಕಲಬುರಗಿ ನಗರ ಸಿ.ಡಿ.ಪಿ.ಓ ಭೀಮರಾಯ, ದಕ್ಷಿಣ ವಲಯದ ಸಿ.ಆರ್.ಸಿ ಪ್ರಕಾಶ ರಾಠೋಡ, ಡಾ.ಸುಧಾ ಹಾಲಕಾಯಿ ಇದ್ದರು.
