ಬೆಂಗಳೂರು,ಮಾ.20:ಸಾರಿಗೆ ಬಸ್ ದರ, ಮೆಟ್ರೊ ಪ್ರಯಾಣ ದರ ದುಬಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಬೆನ್ನಲ್ಲೆ ಕರ್ನಾಟಕ ವಿದ್ಯುತ್‌ಚ್ಛಕ್ತಿ ಆಯೋಗ (ಕೆಇಆರ್‌ಸಿ) ಗ್ರಾಹಕರಿಗೆ ವಿದ್ಯುತ್ ಶಾಕ್ ನೀಡಿದೆ. ಪ್ರತಿ ಯೂನಿಟ್‌ಗೆ ವಿದ್ಯುತ್ ದರವನ್ನು 36 ಪೈಸೆ ಹೆಚ್ಚು ಮಾಡಿ ಆದೇಶ ಹೊರಡಿಸಿದೆ. ಏ. 1 ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.
ಪಿಂಚಣಿ ಗ್ರಾಚ್ಯುಟಿ ನೆಪದಲ್ಲಿ 36 ಪೈಸೆ ಹೆಚ್ಚಳ ಮಾಡಿರುವುದರಿಂದ ಪ್ರತಿ ಮನೆಗೆ ಅಂದಾಜು 90 ರೂ. ವಿದ್ಯುತ್ ಬಿಲ್ ಹೆಚ್ಚಾಗುವ ಸಾಧ್ಯತೆ ಇದೆ.
ಇದಷ್ಟೆ ಅಲ್ಲದೆ ಗ್ರಾಹಕರು ಬಳಕೆ ಮಾಡುವ ಪ್ರತಿ ಯೂನಿಟ್ ವಿದ್ಯುತ್‌ಗೆ 2025-26ರಲ್ಲಿ 36 ಪೈಸೆ, 2026-27ರಲ್ಲಿ ತಲಾ 35 ಪೈಸೆ ಹಾಗೂ 2027-28ರಲ್ಲಿ ತಲಾ 34 ಪೈಸೆಯನ್ನು ಹೆಚ್ಚುವರಿಯಾಗಿ ವಿಧಿಸಲು ಕೆಇಆರ್‌ಸಿ ಮುದ್ರೆ ಒತ್ತಿದೆ.
ವಿದ್ಯುತ್ ಪ್ರಸರಣ ಮತ್ತು ಸರಬರಾಜು ಸಂಸ್ಥೆಗಳ ಸಿಬ್ಬಂದಿಯ ಪಿಂಚಣಿ, ಗ್ರಾಚ್ಯುಟಿಗೆ ಸರ್ಕಾರ ನೀಡಬೇಕಾದ ಪಾಲಿನ ಮೊತ್ತವನ್ನು ಗ್ರಾಹಕರ ಜೇಬಿನಿಂದ ಸಂಗ್ರಹಿಸಲು ನಿರ್ಧರಿಸಿದ್ದು, ವಿದ್ಯುತ್ ಬಳಕೆದಾರರಿಗೆ ದರ ಏರಿಕೆ ಶಾಕ್ ಕೊಟ್ಟಿದೆ.
ರಾಜ್ಯಸರ್ಕಾರ ಕೆಇಬಿ ರದ್ದುಪಡಿಸಿ ಕೆಪಿಟಿಸಿಎಲ್ ಹಾಗೂ 5 ಎಸ್ಕಾಂಗಳನ್ನು ರಚಿಸಿದ ವೇಳೆ ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ಸರ್ಕಾರವೇ ಭರಿಸುವುದಾಗಿ ಒಪ್ಪಿಕೊಂಡಿತ್ತು.
ಆದರೆ, 2021 ರಿಂದ ಹಣವನ್ನು ಭರಿಸಲು ಒಪ್ಪಲಿಲ್ಲ. ಈ ಹಣವನ್ನು ಗ್ರಾಹಕರ ಮೇಲೆ ವರ್ಗಾಯಿಸಲು ಹೇಳಿತ್ತು. ಈ ವಿಚಾರ ಕೆಇಆರ್‌ಸಿ ಮುಂದೆ 2021ರಲ್ಲಿ ಪ್ರಸ್ತಾಪವಾದಾಗ ಇದಕ್ಕೆ ಆಯೋಗ ಒಪ್ಪಿಗೆ ನೀಡದೆ ಸ್ಪಷ್ಟವಾಗಿ ತಳ್ಳಿ ಹಾಕಿತ್ತು.
ಮಾ. 25 2024 ರಂದು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ ಗ್ರಾಹಕರ ಮೇಲೆ ಪಿಂಚಣಿ ವರ್ಗಾಯಿಸಲು ತಡೆ ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಆದ್ದರಿಂದ ಹೈಕೋರ್ಟ್ ಆದೇಶದಂತೆ ಕೆಇಆರ್‌ಸಿ ಜನರ ಮೇಲೆ ಹೊರೆ ಹಾಕಿ ಪ್ರತಿ ಯುನಿಟ್ ವಿದ್ಯುತ್ ದರವನ್ನು 36 ಪೈಸೆಯಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಸರ್ಕಾರದ ಆದೇಶಾನುಸಾರ 2021 ರಿಂದ 2024ರ ವರೆಗೆ 4,659 ಕೋಟಿ ರೂ. ಸಂಗ್ರಹಿಸಬೇಕಾಗಿದ್ದು, ಈ ಹಣವನ್ನು ಪ್ರಸಕ್ತ ಸಾಲಿನಿಂದಲೇ 6 ಕಂತುಗಳಲ್ಲಿ ಗ್ರಾಹಕರು ನೀಡಬೇಕಾಗುತ್ತದೆ.
ವಿದ್ಯುತ್ ದರ ಹೆಚ್ಚಳದಿಂದ ಸಾಮಾನ್ಯ ಜನರಿಗೆ ತೊಂದರೆ ಯಾಗುವುದಿಲ್ಲ. ಗೃಹಜ್ಯೋತಿ ಯೋಜನೆಯಿಂದಾಗಿ ನಷ್ಟವಾಗಿಲ್ಲ. ಗೃಹಜ್ಯೋತಿ ನಷ್ಟದಿಂದ ವಿದ್ಯುತ್ ದರ ಹೆಚ್ಚಳ ಮಾಡಿಲ್ಲ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತಿದ್ದೇವೆ. 200 ಯುನಿಟ್‌ಗಿಂತ ಹೆಚ್ಚುವರಿಯಾಗಿ ಬಳಕೆ ಮಾಡಿದ ಗ್ರಾಹಕರಿಗೆ ದರ ಏರಿಕೆ ಅನ್ವಯವಾಗುತ್ತವೆ ಎಂದು ಹೇಳಿದರು.
ಬಿವೈವಿ ಆಕ್ರೋಶ ವಿದ್ಯುತ್ ದರ ಏರಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿರುವ ಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯ್ ಕೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ನೊಂದಿಗೆ ಮಾತನಾಡಿದ ಅವರು, ದರ ಏರಿಕೆ ಮಾಡಿರುವ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯೊಂದನ್ನೇ ಅನುಷ್ಠಾನ ಮಾಡುತ್ತಿದೆ. ದರ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿದ್ದಾರೆ ಎಂದು ಹೇಳಿದರು.
ಒಂದು ಕಡೆ ಉಚಿತ ವಿದ್ಯುತ್ ಎಂಬುದಾಗಿ ಹೇಳುತ್ತಾರೆ. ಮತ್ತೊಂದೆಡೆ ಲೋಕೋಪಯೋಗಿ ಇಲಾಖೆಯೊಂದರಲ್ಲೇ 8 ಸಾವಿರ ರೂ. ವಿದ್ಯುತ್ ಬಾಕಿ ಉಳಿಸಿಕೊಂಡಿದೆ. ಸದನದಲ್ಲಿ ಈ ಎಲ್ಲ ವಿಚಾರವನ್ನು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
