August 4, 2025 4:48 am

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ಸುದ್ದಿ » ಜಿಲ್ಲಾ ಸಮನ್ವಯ ಸಮಿತಿ ಸಭೆ:ಲಾರ್ವಾ ಸಮೀಕ್ಷೆ ತೀವ್ರಗೊಳಿಸಿ, ಈಡಿಸ್ ಉತ್ಪತ್ತಿ ತಾಣ ನಿರ್ಮೂಲನೆ ಮಾಡಿ-ಬಿ.ಫೌಜಿಯಾ ತರನ್ನುಮ್

ಜಿಲ್ಲಾ ಸಮನ್ವಯ ಸಮಿತಿ ಸಭೆ:ಲಾರ್ವಾ ಸಮೀಕ್ಷೆ ತೀವ್ರಗೊಳಿಸಿ, ಈಡಿಸ್ ಉತ್ಪತ್ತಿ ತಾಣ ನಿರ್ಮೂಲನೆ ಮಾಡಿ-ಬಿ.ಫೌಜಿಯಾ ತರನ್ನುಮ್

ಕಲಬುರಗಿ,ಮೇ.22: ಸಾಂಕ್ರಾಮಿಕ ರೋಗ ಡೆಂಗ್ಯೂ ಹರಡಲು ಕಾರಣವಾಗುವ ಈಡಿಸ್ ಸೊಳ್ಳೆಗಳ ಉತ್ಪತ್ತಿ ತಾಣಗಳ ನಿರ್ಮೂಲನೆ ಮಾಡಬೇಕು ಮತ್ತು ಲಾರ್ವಾ ಸಮೀಕ್ಷೆ ತೀವ್ರಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
       ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡೆಂಗ್ಯೂ ರೋಗಗಳ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಜರುಗಿದ ಜಿಲ್ಲಾ ಸಮನ್ವಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ನಗರಸಭೆ, ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರ ಮತ್ತು ವಿವಿಧ ಇಲಾಖೆಯ ಸಹಕಾರ ಪಡೆಯಬೇಕು ಎಂದರು.
        ಡೆಂಗ್ಯೂ ಜ್ವರವು ಈಡಿಸ್ ಎಂಬ ಜಾತಿಯ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು, ಈ ಸೊಳ್ಳೆಗಳ ತಿನ್ನುವ ಗಪ್ಪೆ ಮೀನುಗಳನ್ನು ವಿಶೇಷವಾಗಿ ಚಿತ್ತಾಪುರ, ಶಹಾಬಾದ, ಸೇಡಂ ತಾಲೂಕಿನ ಕಲ್ಲು ಗಣಿ ಪ್ರದೇಶದಲ್ಲಿ ನಿಂತ ನೀರಿನಲ್ಲಿ ಬಿಡಬೇಕು. ಇದಲ್ಲದೆ ಬಾವಿ, ನೀರು ನಿಲ್ಲು ತೆಗ್ಗ ಪ್ರದೇಶದಲ್ಲಿ, ವಾಟರ್ ಟ್ಯಾಂಕ್‌ನಲ್ಲಿ ಬಿಡಬಹುದಾಗಿದೆ. ಇದನ್ನು ಅಭಿಯಾನದ ರೂಪದಲ್ಲಿ ಮಾಡಬೇಕು ಎಂದ ಜಿಲ್ಲಾಧಿಕಾರಿಗಳು, ಲಸಿಕಾಕರಣ ಕಾರ್ಯಕ್ರಮಗಳು ನಿಗದಿಯಂತೆ ಶೇ.100ರಷ್ಟು ಪ್ರಗತಿ ಸಾಧಿಸಬೇಕೆಂದರು.
       ಈಡಿಸ್ ಸೊಳ್ಳೆಗಳು ನೀರು ಶೇಖರಣೆಯ ತೊಟ್ಟಿಗಳು, ಬ್ಯಾರಲ್‌ಗಳು, ಡ್ರಮ್‌ಗಳು, ಹೂವಿನ ಕುಂಡ ಮುಂತಾದವುಗಳಲ್ಲದೇ ಮನೆ ಸುತ್ತ ಮುತ್ತ ಬಯಲಲ್ಲಿ ಬಿಸಾಡಿದ ಪಿಂಗಾಣಿ ವಸ್ತುಗಳು, ಪ್ಲಾಸ್ಟಿಕ್ ಕಪ್ಪುಗಳು, ಟೈರ್‌ಗಳು, ತೆಂಗುವಿನ ಚಿಪ್ಪು ಮತ್ತು ಇತರೆ ವಸ್ತುಗಳಲ್ಲಿ ನೀರು ಸಂಗ್ರಹವಾದಾಗ ಉತ್ಪತ್ತಿಯಾಗುತ್ತವೆ. ಹೀಗಾಗಿ ನೀರು ನಿಲ್ಲದಂತೆ ಸಾರ್ವಜನಿಕರಿಗೆ ಮನೆ-ಮನೆ ಹೋಗಿ ಅರಿವು ಮೂಡಿಸಬೇಕು. ಸಾರಿಗೆ ಸಂಸ್ಥೆಯ ಕಾರ್ಯಾಗಾರ, ಡಿಪೋಗಳಲ್ಲಿನ ಸಿಬ್ಬಂದಿಗಳಿಗೂ ಜಾಗೃತಿ ಮೂಡಿಸಬೇಕು ಮತ್ತು ಬಸ್‌ಗಳಲ್ಲಿ ಪೋಸ್ಟರ್ ಅಂಟಿಸುವ ಮೂಲಕ ವ್ಯಾಪಕ ಪ್ರಚಾರ ಕಾರ್ಯ ಸಹ ಹಮ್ಮಿಕೊಳ್ಳಬೇಕು ಎಂದರು.
      ಕಸ ಬಿಸಾಡುವವರಿಗೆ ದಂಡ ಹಾಕಿ: ಕಲಬುರಗಿ ಮಹಾನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು, ಇದಕ್ಕೆ ಮೂಲ ಕಾರಣ ಅನೈರ್ಮಲ್ಯ. ಹೀಗಾಗಿ ಮಹಾನಗರ ಪಾಲಿಕೆಯಿಂದ ಸ್ವಚ್ಛತೆ ಅಭಿಯಾನ ಮಾಡುವುದರ ಜೊತೆಗೆ ಕಸ ಹಾಕುವವರ ಮೇಲೆ ದಂಡ ಹಾಕಬೇಕು ಮತ್ತು ರಸ್ತೆ, ನಿವೇಶನದ ಮೇಲಿರುವ ಅನುಪಯುಕ್ತ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಬೇಕೆಂದು ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರಿಗೆ ಡಿ.ಸಿ. ಸೂಚಿಸಿದಲ್ಲದೆ, ವಸತಿ ನಿಲಯ, ಶಾಲೆ-ಕಾಲೇಜು ಮತ್ತು ಗ್ರಾಮ ಪಂಚಾಯತಿ, ತಾಲೂಕ ಪಂಚಾಯತಿ, ಪೌರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ಆಯೋಜಿಸಬೇಕು ಎಂದು ತಿಳಿಸಿದರು.
          ಜಿಲ್ಲಾ ಕೀಟಶಾಸ್ತ್ರಜ್ಞ ಚಾಮರಾಜ ದೊಡ್ಡಮನಿ ಅವರು ಡೆಂಗ್ಯೂ ರೋಗ ಲಕ್ಷಣ, ರೋಗ ಹರಡುವಿಕೆ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ವಿವಿಧ ಇಲಾಖೆಯ ಸಹಭಾಗಿತ್ವದ ಬಗ್ಗೆ ವಿವರ ನೀಡುತ್ತಾ, ಡೆಂಗ್ಯೂ ರೋಗ ಪತ್ತೆಯಾದಲ್ಲಿ ಕೂಡಲೆ ಚಿಕಿತ್ಸೆ ಒದಗಿಸಲು ಜಿಮ್ಸ್ ಆಸ್ಪತ್ರೆಯಲ್ಲಿ 20, ಪ್ರತಿ ತಾಲೂಕಾ ಆಸ್ಪತ್ರೆಯಲ್ಲಿ  ತಲಾ 10 ಹಾಗೂ ಉದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 5 ಹಾಸಿಗೆಗಳು ಡೆಂಗ್ಯೂ ಪೀಡಿತ ರೋಗಿಗಳಿಗೆ ಮೀಸಲಿರಿಸಿದೆ ಎಂದು ತಿಳಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ಪೊಲಿಯೋ ಸರ್ವೆಲೆನ್ಸ್ ಅಧಿಕಾರಿ ಡಾ.ಅನೀಲ ತಾಳಿಕೋಟಿ ಅವರು ಡೆಂಗ್ಯೂ ರೋಗ, ರುಬೆಲ್ಲಾ, ಮೀಸಲ್ಸ್ ಕುರಿತು ವಿಭಾಗದ ಚಿತ್ರಣ ಸಭೆ ಮುಂದಿಟ್ಟರು.
ಇದೇ ಸಂದರ್ಭದಲ್ಲಿ ಡೆಂಗ್ಯೂ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಿದ್ದಪಡಿಸಿರುವ ಪೋಸ್ಟರ್‌ಗಳನ್ನು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಬಿಡುಗಡೆ ಮಾಡಿದರು.
       ಸಭೆಯಲ್ಲಿ ಜಿಲ್ಲಾ ಸರ್ಜನ್ ಡಾ. ರುಕಿಯಾ ಅಸ್ನಾ ರಬ್ಹಾ, ಆರ್.ಸಿ.ಎಚ್.ಓ ಡಾ.ಸಿದ್ರಾಮ ಪಾಟೀಲ, ಜಿಲ್ಲಾ ಪಂಚಾಯತ್ ಸಿ.ಪಿ.ಓ ಎಸ್.ಎಸ್.ಮಠಪತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಭು ದೊರೆ ಸೇರಿದಂತೆ ಆರೋಗ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು ಭಾಗವಹಿಸಿದ್ದರು. ಡಿ.ಎಚ್.ಓ ಡಾ.ಶರಣಬಸಪ್ಪ ಕ್ಯಾತನಾಳ ಸರ್ವರನ್ನು ಸ್ವಾಗತಿಸಿ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ಸಭೆಗೆ ಮಂಡಿಸಿದರು. ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಚಂದ್ರಕಾoತ ಏರಿ ವಂದಿಸಿದರು.

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price