• ಕಲಬುರಗಿ ಜಿಲ್ಲೆಯಲ್ಲಿ ʼವಿದ್ಯಾದೃಷ್ಟಿʼ ಕಾರ್ಯಕ್ರಮ
• ಕಲಬುರಗಿ ಜಿಲ್ಲೆಯ 8 ತಾಲ್ಲೂಕುಗಳಲ್ಲಿ ನೇತ್ರ ಪರೀಕ್ಷೆ ಆಂದೋಲನ
• 11 ಲಕ್ಷ ಮಂದಿಗೆ ನೇತ್ರ ಪರೀಕ್ಷೆ, ಅಗತ್ಯವಿದ್ದವರಿಗೆ ಉಚಿತ ಕನ್ನಡಕ
• 5.32 ಲಕ್ಷ ಮಕ್ಕಳು ಹಾಗೂ 6 ಲಕ್ಷ ವಯಸ್ಕರಿಗೆ ಕಣ್ಣಿನ ಆರೈಕೆ
ಬೆಂಗಳೂರು, 6 ಮಾರ್ಚ್ 2025
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕಣ್ಣಿನ ಆರೈಕೆ ಸೇವೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಜೇಸಿಸ್ (ZEISS) ಇಂಡಿಯಾ ಸಂಸ್ಥೆಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದ್ದು, ಕಲಬುರಗಿ ಜಿಲ್ಲೆಯ 11 ಲಕ್ಷ ಮಂದಿಗೆ ನೇತ್ರ ಪರೀಕ್ಷೆ ನಡೆಸಲಾಗುವುದಲ್ಲದೆ ಅಗತ್ಯವಿದ್ದವರಿಗೆ ಉಚಿತ ಕನ್ನಡಕ ವಿತರಿಸುವ ವಿದ್ಯಾದೃಷ್ಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ
ಈ ಒಡಂಬಡಿಕೆಯ ಅನುಸಾರ ಕಲಬುರಗಿ ಜಿಲ್ಲೆಯಲ್ಲಿ 5,32,000 ಶಾಲಾ ಮಕ್ಕಳಿಗೆ ಕಣ್ಣಿನ ಪರೀಕ್ಷೆ ಅಭಿಯಾನವನ್ನು ನಡೆಸಲಾಗುವುದು. ಕಲಬುರಗಿ ಜಿಲ್ಲೆಯಾದ್ಯಂತ ಮಕ್ಕಳ ದೃಷ್ಟಿ-ಸಂಬಂಧಿತ ಸಮಸ್ಯೆಗಳನ್ನು ಪತ್ತೆಹಚ್ಚಿ ಅಗತ್ಯವಿರುವವರಿಗೆ ಕನ್ನಡಕಗಳನ್ನು ವಿತರಿಸಲಾಗುವುದು.ಈ ಯೋಜನೆಯು ಮಕ್ಕಳ ಕಣ್ಣಿನ ಆರೋಗ್ಯ ಸುಧಾರಿಸುವ ಗುರಿಯನ್ನು ಹೊಂದಿದ್ದು, ಜೇಸಿಸ್ (ZEISS) ಇಂಡಿಯಾ ಸಂಸ್ಥೆಯು ವಿದ್ಯಾದೃಷ್ಟಿ ಕಾರ್ಯಕ್ರಮದಡಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಿದೆ. ಅಲೋಕ ಸಂಚಾರಿ ವಾಹನದ ಮೂಲಕ ನೇತ್ರ ಪರೀಕ್ಷೆಯನ್ನು ಕೈಗೊಳ್ಳಲಾಗುವುದು. ಇದಲ್ಲದೆ, ನೇತ್ರತಜ್ಞರು (ಆಪ್ಟೋಮೆಟ್ರಿಸ್ಟ್‌ಗಳು) ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ನಡೆಸುವ ಮೂಲಕ ಅವರ ವೃತ್ತಿಪರತೆಯನ್ನು ಹೆಚ್ಚಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಕಣ್ಣಿನ ಆರೋಗ್ಯವನ್ನು ಸುಧಾರಿಸುವ ತುರ್ತು ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ಜೇಸಿಸ್ (ZEISS) ಇಂಡಿಯಾದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಇದರಿಂದ ಮಕ್ಕಳ ಕಣ್ಣಿನ ಆರೋಗ್ಯ ಸುಧಾರಿಸಿ ಕಲಿಕೆಯನ್ನು ಸುಗಮಗೊಳಿಸುವ ಗುರಿ ಹೊಂದಿದ್ದೇವೆ. ಇದರಡಿ ಕಲಬುರಗಿಯಲ್ಲಿ 5.32 ಲಕ್ಷ ಶಾಲಾ ಮಕ್ಕಳಿಗೆ ಕಣ್ಣಿನ ತಪಾಸಣೆ ನಡೆಸಿ ಅಗತ್ಯವಿರುವ ಕನ್ನಡಕ ವಿತರಿಸಲಾಗುತ್ತದೆ. ಹೆಚ್ಚುವರಿಯಾಗಿ 6,00,000 ಬಡ ವಯಸ್ಕರಿಗೂ ಉಚಿತ ಕಣ್ಣಿನ ತಪಾಸಣೆ ನಡೆಸಲಾಗುತ್ತದೆ. ಇಂಥ ವಿಶಿಷ್ಟ ಯೋಜನೆಗೆ ಕೈಜೋಡಿಸಿರುವ ಜೇಸಿಸ್ ಇಂಡಿಯಾ ಸಂಸ್ಥೆಯನ್ನು ಶ್ಲಾಘಿಸುತ್ತೇನೆ ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಕಣ್ಣಿನ ಆರೋಗ್ಯಕ್ಕಾಗಿ ಈಗಾಗಲೇ ರಾಜ್ಯಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಆಶಾಕಿರಣ ಯೋಜನೆಯಡಿ ಮನೆಬಾಗಿಲಿಗೆ ತೆರಳಿ ಕಣ್ಣಿನ ತಪಾಸಣೆ ಮಾಡಲಾಗುತ್ತದೆ. ಕಣ್ಣಿನ ಆರೈಕೆಯಲ್ಲಿ ಜೇಸಿಸ್ ಇಂಡಿಯಾ ಸಹಭಾಗಿತ್ವ ನಮಗೆ ಇನ್ನಷ್ಟು ನೆರವಾಗಲಿದೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಆರೋಗ್ಯ ಕಾರ್ಯಕ್ರಮಗಳನ್ನು ಏರ್ಪಡಿಸುವುದರಿಂದ ಅಲ್ಲಿನ ಜನರ ಆರೋಗ್ಯ ಸುಧಾರಣೆ ಮೂಲಕ ಸರ್ವತೋಮುಖ ಅಭಿವೃದ್ಧಿಗೂ ನೆರವಾಗಲಿದೆ ಎಂದರು.
ಲೋಕಸಭಾ ಸದಸ್ಯರಾದ ರಾಧಕೃಷ್ಣ ದೊಡ್ಡಮನಿ ಮಾತನಾಡಿ, ರಾಜ್ಯಸರ್ಕಾರ ಮತ್ತು ಜೆಸಿಸ್ ಇಂಡಿಯಾ ನಡುವಿನ ಈ ಸಹಭಾಗಿತ್ವ ಕಲಬುರಗಿ ಜನರಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಕಳೆದ ನವೆಂಬರ್ 2024ರಲ್ಲಿ ಜೆಸಿಸ್ ಇಂಡಿಯಾದ ಗ್ಲೋಬಲ್ ಸಾಮರ್ಥ್ಯ ಕೇಂದ್ರದ ಉದ್ಘಾಟನೆಯ ಸಮಯದಲ್ಲಿ ರಾಜ್ಯದ ಗ್ರಾಮೀಣ ಮತ್ತು ಕಡಿಮೆ ಪ್ರದೇಶಗಳಿಗೆ ಕಣ್ಣಿನ ಆರೈಕೆಯಲ್ಲಿ ಸರ್ಕಾರದೊಂದಿಗೆ ಕೈಜೋಡಿಸಲು ಕಂಪೆನಿ ಆಸಕ್ತಿ ತೋರಿತ್ತು. ಈಗ ಒಪ್ಪಂದ ಮಾಡಿಕೊಂಡಿದ್ದೇವೆ ಎಂದರು.
ಜೇಸಿಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮೈಗಲ್ ಗೊನ್ಜಾಲೆಜ್ ಡಯಾಜ್ ಮಾತನಾಡಿ, ರಾಜ್ಯದ ಪ್ರತಿ ಮಗು ಕಣ್ಣಿನ ಸಮಸ್ಯೆಯಿಂದ ದೂರ ಉಳಿಯಬೇಕು ಎಂಬ ಉದ್ದೇಶ ನಮ್ಮದು. ಈ ನಿಟ್ಟಿನಲ್ಲಿ ಜೇಸಿಸ್ ಇಂಡಿಯಾ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಇದರಿಂದ ಹೆಚ್ಚು ಮಕ್ಕಳ ಕಣ್ಣಿನ ತಪಾಸಣೆ ಮಾಡಿ ತುರ್ತಾಗಿ ಅವರ ಕಣ್ಣಿನ ಆರೈಕೆ ಮಾಡಿ ಕಲಿಕೆಯು ಸುಗಮಗೊಳ್ಳಲು ನೆರವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ್‌ಸಿಂಗ್, ಕಲಬುರಗಿ ಜಿಲ್ಲೆಯ ಶಾಸಕರಾದ ಶ್ರೀಮತಿ ಖನಿಜ್ ಫಾತೀಮಾ, ಎಂ.ವೈ.ಪಾಟೀಲ್, ಅಲ್ಲಮಪ್ರಭು ಪಾಟೀಲ್, ಜಗದೇವ್ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ್ ಉಪಸ್ಥಿತರಿದ್ದರು.
