“ಉಚಿತ ಬೆಳಕು, ಸುಸ್ಥಿತ ಬದುಕು” ಎಂಬ ಘೋಷ್ಯವಾಕ್ಯದೊಂದಿಗೆ ರಾಜ್ಯದಲ್ಲಿ ಪ್ರತಿ ಮನೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ “ಗೃಹ ಜ್ಯೋತಿ” ಯೋಜನೆ ಜಾರಿಗೆ ತಂದಿದ್ದು, ನಾಡಿನ ಬಡಜನರ ಪಾಲಿಗೆ ಇದು ಬೆಳಕಾಗಿ ಪರಿಣಮಿಸಿದೆ.
ಅಧುನಿಕ ಜೀವನದಲ್ಲಿ ವಿದ್ಯುತ್ ಇಲ್ಲದೆ ದಿನಚರಿ ಶುರುವಾಗುವುದಿಲ್ಲ. ದುಬಾರಿ ದುನಿಯಾದಲ್ಲಿ ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗ ದೊಡ್ಡ ಆರ್ಥಿಕ ಪೆಟ್ಟು ತಿಂದಿದೆ. ಆರ್ಥಿಕ ಮುಗ್ಗಟ್ಟಿನಿಂದ ಕಷ್ಟದಲ್ಲಿರುವ ಬಡ ಜನರ ಕಣ್ಣಿರ ಒರೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ “ಗೃಹ ಜ್ಯೋತಿ ಯೋಜನೆ” ಜಾರಿಗೆ ತಂದಿದ್ದು, ಸೂರ್ಯ ನಗರಿ ಕಲಬುರಗಿಯಲ್ಲಿಯೇ ಇದಕ್ಕೆ ಚಾಲನೆ ನೀಡಿದ್ದು ವಿಶೇಷ.
ಗೃಹ ಜ್ಯೋತಿ ಯೋಜನೆ ಪರಿಣಾಮ ವಿದ್ಯುತ್ ಕಾಣದ ಅನೇಕ ಕುಗ್ರಾಮ, ಜೋಪಡಿಗಳು ವಿದ್ಯುತ್ ಕಾಣುವಂತಾಗಿದೆ. ಬೆಳಕನ್ನೆ ಕಾಣದ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಯಿತು. ಬಹುಸಂಖ್ಯಾತರಿಗೆ ಕಿತ್ತು ತಿನ್ನುವ ಬಡತನವೇ ಅವರ ಬಾಳಿಗೆ ಕತ್ತಲಾಗಿದ್ದು, ಇದನ್ನು ಹೋಗಲಾಡಿಸಿ ಅವರನ್ನು ಆರ್ಥಿಕ ಸಶಕ್ತರನ್ನಾಗಿ ಮಾಡಬೇಕೆಂಬ ನಿಟ್ಟಿನಲ್ಲಿ ಜಾರಿಗೊಳಿಸಿದ “ಗೃಹ ಜ್ಯೋತಿ” ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳು ಜನರ ಸುಸ್ಥಿರ ಬದುಕಿಗೆ ಕಾರಣವಾಗಿದಲ್ಲದೆ ಅವರಲ್ಲಿ ಭರವಸೆಯ ಬೆಳಕಾಗಿ ಪ್ರಜ್ವಲಿಸುತ್ತಿವೆ.
5.42 ಲಕ್ಷ ಕುಟುಂಬಕ್ಕೆ ಉಚಿತ ಬೆಳಕು: ಗೃಹ ಜ್ಯೋತಿ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ಕಳೆದ ಎರಡು ವರ್ಷದ ಅವಧಿಯಲ್ಲಿ ಏಪ್ರಿಲ್-2025 ಮಾಸಾಂತ್ಯಕ್ಕೆ 5,42,950 ಕುಟುಂಬಗಳು 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಲಾಭ ಪಡೆದಿದ್ದು, ಇದಕ್ಕಾಗಿ ಸರ್ಕಾರ 507.98 ಕೋಟಿ ರೂ. ಹಣ ಜೆಸ್ಕಾಂಗೆ ಪಾವತಿಸಿದೆ. ಅಫಜಲಪೂರ ತಾಲೂಕಿನಲ್ಲಿ 42,043, ಆಳಂದ-56,836, ಕಮಲಾಪೂರ-23,781, ಕಲಬುರಗಿ-2,01,661, ಕಾಳಗಿ-17,593, ಚಿಂಚೋಳಿ-43,682, ಚಿತ್ತಾಪುರ-23,191, ಜೇವರ್ಗಿ-35,149, ಯಡ್ರಾಮಿ-18,959, ಶಹಾಬಾದ-36,052 ಹಾಗೂ ಸೇಡಂ ತಾಲೂಕಿನಲ್ಲಿ 44,003 ಗ್ರಾಹಕರು ನೊಂದಾಯಿಸಿಕೊAಡು ಯೋಜನೆಯ ಲಾಭ ಪಡೆಯುತ್ತಿದ್ದಾರೆ.
ಕರೆಂಟ್ ಫ್ರೀ,ಹಣ ಉಳಿತಾಯ: ರಾಜ್ಯ ಸರ್ಕಾರ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಯೋಜನೆಯ ಲಾಭ ಪಡೆದಿರುವ ಆಳಂದ ತಾಲೂಕಿನ ಬೋಧನ ಗ್ರಾಮದ ಮಲ್ಲಿಕಾರ್ಜುನ ಕಾಂದೆ ಅವರು ಈ ಯೋಜನೆಯಡಿ ಉಚಿತ ವಿದ್ಯುತ್‌ನಿಂದ ಮಾಸಿಕ 1,100 ರೂ. ತಮಗೆ ಉಳಿತಾಯವಾಗುತ್ತಿದೆ. ಉಳಿತಾಯದ ಈ ಹಣ ಮನೆಯ ಇತರೆ ಖರ್ಚಿಗೆ ಬಳಸುತ್ತಿರುವೆ ಎಂದು ಸಂತಸದಿAದ ನುಡಿಯುತ್ತಾರೆ.
2-3 ಸಾವಿರ ರೂ. ಉಳಿತಾಯ: ಗೃಹ ಜ್ಯೋತಿ ಯೋಜನೆಯ ಪರಿಣಾಮ ತಮ್ಮ ಕುಟುಂಬಕ್ಕೆ ವಾರ್ಷಿಕ 2-3 ಸಾವಿರ ರೂ. ಉಳಿತಾಯವಾಗುತ್ತಿದೆ. ಈ ಹಣವನ್ನು ತರಕಾರಿ, ಆಹಾರ ಪದಾರ್ಥಗಳ ಖರೀದಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರದ ಉತ್ತಮ ಯೋಜನೆ ಇದಾಗಿದ್ದು, ಬಡ ಕುಟುಂಬಗಳಿಗೆ ಆರ್ಥಿಕವಾಗಿ ಸಬಲರಾಗಲು ಕಾರಣವಾಗಿದೆ ಎನ್ನುತ್ತಾರೆ ಜೇವರ್ಗಿ ತಾಲೂಕಿನ ಕಲ್ಲಹಂಗರಗಾ ಗ್ರಾಮದ ಸುನೀಲ ಗೋಳಾ.
