March 14, 2025 5:17 am

ಶಿವಾನಂದ‌ ಮೆಂತೆ, ಸಂಪಾದಕ
ಸುದ್ದಿ ಈ‌ದಿನ‌ ಕನ್ನಡ‌ ದಿನಪತ್ರಿಕೆ

Home » ಕಲಬುರಗಿ » ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಮಕ್ಕಳ ಸ್ಥಿತಿಗತಿ ಕುರಿತು ಅಧಿಕಾರಿಗಳಿಗೆ ಕಾರ್ಯಾಗಾರ: ಅಧಿಕಾರಿಗಳು ಸಂಘಟಿತರಾಗಿ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಬಾಲ್ಯ ವಿವಾಹ ತಡೆಯಲು ಸಾಧ್ಯ

ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಮಕ್ಕಳ ಸ್ಥಿತಿಗತಿ ಕುರಿತು ಅಧಿಕಾರಿಗಳಿಗೆ ಕಾರ್ಯಾಗಾರ: ಅಧಿಕಾರಿಗಳು ಸಂಘಟಿತರಾಗಿ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಬಾಲ್ಯ ವಿವಾಹ ತಡೆಯಲು ಸಾಧ್ಯ

ಕಲಬುರಗಿ,ಫೆ.28:  ರಾಜ್ಯದಲ್ಲಿ ಸಾಮಾಜಿಕ ಪಿಡುಗಾಗಿರುವ ಬಾಲ್ಯ ವಿವಾಹ ತಡೆಯಬೇಕೆಂದರೆ ಮಕ್ಕಳ ಸಂಬಂಧಿತ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವುದು ತುಂಬಾ ಅವಶ್ಯಕವಾಗಿದೆ ಎಂದರು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣಗೌಡ ಕೆ. ಹೇಳಿದರು.

ಶುಕ್ರವಾರ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ-1098, ಗುಲಬರ್ಗಾ ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಕಲಬುರಗಿ ವಿಭಾಗದ 7 ಜಿಲ್ಲೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಲ್ಯಾಣ ಕರ್ನಾಟಕದಲ್ಲಿ ಮಕ್ಕಳ ಸ್ಥಿತಿ ಗತಿ, ಶಾಲೆಯಿಂದ ಹೊರಗುಳಿದ ಮಕ್ಕಳು, ಮಕ್ಕಳ ಭಿಕ್ಷಾಟನೆ ಹಾಗೂ ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಕುರಿತು ಆಯೋಜಿಸಿದ ವಿಭಾಗ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹ ತಡೆಯುವುದು ಕೇವಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆಗೆ ಗುತ್ತಿಗೆ ಕೊಟ್ಟಿಲ್ಲ. ಬಾಲ್ಯ ವಿವಾಹ ತಡೆಯಲು ಸರ್ಕಾರ ಸೂಚಿಸಿದ ಪ್ರತಿಯೊಬ್ಬ ಅಧಿಕಾರಿ ಸಕ್ರಿಯವಾಗಿ ಭಾಗವಹಿಸಬೇಕಿದೆ. ಬಾಲ್ಯ ವಿವಾಹ ನಿಲ್ಲಿಸಲು ಹೋದಾಗ ಸಮಾಜ ಮತ್ತು ಸಮುದಾಯ ವಿರೋಧ ಎದುರಾಗಬಹುದು. ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ, ಶಿಕ್ಷಕರು, ವಿ.ಎ., ಪಿ.ಡಿ.ಓ ಗಳಿಗೆ ಮಾಹಿತಿ ಇಲ್ಲದೆ ಹಳ್ಳಿಯಲ್ಲಿ ಬಾಲ್ಯ ವಿವಾಹ ನಡೆಯುವುದಿಲ್ಲ. ಹೀಗಾಗಿ ಮುಂಚಿತವಾಗಿ ಪೋಷಕರನ್ನು ಸಮಾಲೋಚಿಸಿ ಕಾಯ್ದೆ ಬಗ್ಗೆ ಅರಿವು ನೀಡಿದಲ್ಲಿ ಇದನ್ನು ತಡೆಯಬಹುದಾಗಿದೆ. ಇಲ್ಲದೆ ಹೋದಲ್ಲಿ ಬಾಲಕನಿಗೆ ಅದು ಜೈಲ್ ಮ್ಯಾರೇಜ್ ಆಗುತ್ತದೆ ಎಂದರು.

ಇಂದು ಎಲ್ಲಾ ವಲಯದಲ್ಲಿ ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ಕಾಣುತ್ತಿದ್ದೇವೆ. ರಕ್ಷಕರೆ ಭಕ್ಷರಾಗುತ್ತಿರುವುದು ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ನಿರ್ಭಯಾ ಪ್ರಕರಣದ ನಂತರ ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಅನೇಕ ಕಾನೂನು ಕಾಯ್ದೆಗಳು ಬಂದಿವೆ. ಮಕ್ಕಳು ರಾಷ್ಟ್ರದ ಆಸ್ತಿಯಾಗಿದ್ದು, ಅವರ ಸಂರಕ್ಷಣೆ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದು ಪ್ರತಿಪಾದಿಸಿದರು.

ಹಳ್ಳಿಯಲ್ಲಿ ಕಣ್ಣಾವಲು ಸಮಿತಿ ಚುರುಕಾಗಿ ಕಾರ್ಯನಿರ್ವಹಿಸಲಿ: ಇನ್ನು ಗ್ರಾಮ ಪಂಚಾಯತ್, ಹಳ್ಳಿ ಮಟ್ಟದಲ್ಲಿ

ಮಹಿಳೆಯರ ಮತ್ತು ಮಕ್ಕಳ ಕಣ್ಣಾವಲು ಸಮಿತಿ ಕಾರ್ಯಾ ಚಟುವಟಿಕೆ ತೀವ್ರಗೊಳಿಸುವ ಅಗತ್ಯವಿದ್ದು, ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರಿಗೆ ಡಿ.ಸಿ. ಅವರು ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂದು ನಾಗನಗೌಡ ಕೆ. ಒತ್ತಿ ಹೇಳಿದರು.

ಮಕ್ಕಳೊಂದಿಗೆ ಚೆಲಾಟ ಆಯೋಗ ಸಹಿಸಲ್ಲ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ

ಶಶಿಧರ ಕೋಸಂಜೆ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶದ 6 ಲಕ್ಷ ಸೇರಿ ರಾಜ್ಯದಾದ್ಯಂತ 26 ಲಕ್ಷ ಶಾಲಾ ಮಕ್ಕಳ ಶಿಕ್ಷಣ ಇಲಾಖೆಯ ಸ್ಯಾಟ್ಸ್ ನಲಿಲ ಆಧಾರ್ ಮೌಲ್ಯಕರಣ ಇಲ್ಲದಿರುವುದಕ್ಕೆ ಅವರಿಗೆ ವಿದ್ಯಾರ್ಥಿ ವೇತನ ಪಾವತಿಯಾಗುತ್ತಿಲ್ಲ. ಕೂಡಲೆ ಇದನ್ನು ಸರಿಪಡಿಸಿ ಎಂದು ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ಡಿ.ಡಿ.ಪಿ.ಐ.ಗಳಿಗೆ ಕಳೆದ ಜನವರಿ 21 ರಂದು ಪತ್ರ ಬರೆದಿದ್ದಾರೆ. ಪತ್ರ ಬರೆದು ತಿಂಗಳಾದರು ಸಮಸ್ಯೆ ನೀಗಿಲ್ಲ. ಮೂಲಭೂತ ಹಕ್ಕಾದ ಶಿಕ್ಷಣ ಪಡೆಯಲು ಮಕ್ಕಳಿಗೆ ಇಷ್ಟೊಂದು ತೊಂದರೆ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

1929 ರಲ್ಲಿಯೇ ಬಾಲ್ಯ ವಿವಾಹ ನಿಷೇಧ ಕಾಯ್ದೆ ದೇಶದಲ್ಲಿ ಜಾರಿಯಲ್ಲಿದ್ದರೂ ಇಂದಿಗೂ ಬಾಲ್ಯ ವಿವಾಹ ಪ್ರಕರಣ ನಿಯಂತ್ರಣಕ್ಕೆ ಬರುತ್ತಿಲ್ಲ. ಪ್ರಕರಣ ಸಾರ್ವಜನಿಕವಾಗಿ ಬೆಳಕಿಗೆ ಬಂದ ನಂತರ ಆಯೋಗ ಹೇಳಿದ ಮೇಲೆ ಪ್ರಕರಣ ದಾಖಲಿಸುವುದಾದರೆ ಅಧಿಕಾರಿಗಳಿಗೆ ನೈತಿಕ ಜವಾಬ್ದಾರಿ ಇಲ್ವಾ ಎನ್ನುವ ಪ್ರಶ್ನೆ ಮೂಡುತ್ತದೆ. ಮಕ್ಕಳ ವಿಷಯದಲ್ಲಿ ಚೆಲ್ಲಾಟವನ್ನು ಆಯೋಗ ಸಹಿಸಲ್ಲ ಎಂದ ಎಚ್ಚರಿಕೆಯ ಮಾತುಗಳನ್ನಾಡಿದರು.

ಮಕ್ಕಳಿಗೆ ಮನೆ ನಂತರ ಶಾಲೆ ಅತ್ಯಂತ ಸುರಕ್ಷಿತ ಸ್ಥಳ ಎಂದು ನಾವು ಭಾವಿಸಿದ್ದೇವೆ. ಆದರೆ ಶಿಕ್ಷಕರು. ಮುಖ್ಯ ಗುರುಗಳು, ವಾಹನ ಚಾಲಕರು, ಜವಾನ್ ಹೀಗೆ ಶಾಲಾ ಸಿಬ್ಬಂದಿಗಳಿಂದಲೆ ರಾಜ್ಯದಾದ್ಯಂತ 3,800 ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ರಕ್ಷಕರೇ ಭಕ್ಷಕರಾದರೆ ಮಕ್ಕಳು ಎಲ್ಲಿಗೆ ಹೋಗಬೇಕು. ನೊಂದವರಿಗೆ ನ್ಯಾಯ ಒದಗಿಸುವ ಕೆಲಸ ಜವಾಬ್ದಾರಿಯುತ ಅಧಿಕಾರಿಗಳು ಮಾಡಬೇಕಿದೆ. ಇಲ್ಲದೆ ಹೋದರೆ ಇದು ಆತ್ಮ ವಂಚನೆ ಮಾಡಿದಂತಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಸ್ವಾತಂತ್ರ್ಯ ಬಂದು ಅಮೃತ ಮಹೋತ್ಸವದ ಈ ಕಾಲದಲ್ಲಿಯೂ ಬಾಲ್ಯ ವಿವಾಹದಂತ ಸಾಮಾಜಿಕ ಪಿಡುಗು ಇನ್ನು ನಿರ್ಮೂಲನೆಯಾಗದಿರುವುದು ದುರ್ದೈವದ ಸಂಗತಿ. ಮಕ್ಕಳ ಹಕ್ಕುಗಳು ಕುರಿತು ಜನಸಮುದಾಯಕ್ಕೆ ಅರಿವು ಮೂಡಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದರು.

ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಮಾತನಾಡಿ ಜಿಲ್ಲೆಯಲ್ಲಿ ಮಕ್ಕಳ ಡ್ರಾಪ್ ಔಟ್ ತಡೆಯಲು ಸರ್ವ ಪ್ರಯತ್ನ ನಡೆದಿದೆ. ಇಲ್ಲಿನ ಕಾರ್ಮಿಕರು ಉದ್ಯೋಗ ಅರಸಿ ಮುಂಬೈ, ಪುಣೆ, ಬೆಂಗಳೂರಿಗೆ ಮಕ್ಕಳನ್ನು ಕರೆದುಕೊಂಡು ಗುಳೆ ಹೋಗುತ್ತಿದ್ದು, ಇದು ನಮಗೆ ಸವಾಲಾಗಿ ಪರಿಣಮಿಸಿದೆ. ಶ್ರಾವಣ ಮಾಸದಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರಲ್ಲ, ಆರ್.ಬಿ.ಎಸ್.ಕೆ ಯೋಜನೆಯಡಿ ಪ್ರತಿಯೊಂದು ಶಾಲೆಗೆ ವೈದ್ಯ ತಂಡ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ನಿಯಮಿತವಾಗಿ ಮಾಡಲಾಗುತ್ತಿದ್ದು, ಹಳ್ಳಿ ಹಂತದಲ್ಲಿ ಕಣ್ಣಾವಲು ಸಮಿತಿ ರಚಿಸಲಾಗುವುದು ಎಂದರು.

ಆಯೋಗದ ಸದಸ್ಯೆ ಅಪರ್ಣಾ ಎಮ್.ಕೊಳ್ಳಾ ಪ್ರಸ್ತಾವಿಕವಾಗಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ 62 ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದ್ದಾರೆ ಎಂದು 7-8 ತಿಂಗಳ ಹಿಂದೆ ಸುದ್ದಿ ಮಾಧ್ಯಮದಲ್ಲಿ ವರದಿಯಾಗುತ್ತು. ಇತ್ತೀಚಿನ ಆರ್.ಡಿ.ಪಿ.ಆರ್. ಇಲಾಖೆ ಸರ್ವೆ ಪ್ರಕಾರ ಪ್ರತಿ ಜಿಲ್ಲೆಯಲ್ಲಿ 6-7 ಸಾವಿರ ಮಕ್ಕಳು ಶಾಲೆಯಿಂದ ವಿಮುಖರಾಗಿರುವ ಸಂಗತಿ ಹೊರಬಂತು. ಇನ್ನು ಶಿಕ್ಷಣ ಇಲಾಖೆಯ ಅಂಕಿ-ಸಂಖ್ಯೆ ಇದಕ್ಕು ವಿಭಿನ್ನ. ಸರ್ಕಾರದ ಇಲಾಖೆಗಳ ಅಧಿಕಾರಿಗಳ ಮಧ್ಯೆ ಸಮನ್ವಯತೆ ಇಲ್ಲದಿದ್ದರೆ ಮಕ್ಕಳ ರಕ್ಷಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು

ಪ್ರದೇಶದಲ್ಲಿ 10 ಬಾಲ್ಯ ವಿವಾಹದ ವರದಿಯಾದರೆ ಅದರಲ್ಲಿ 8 ಮಕ್ಕಳು ಸರ್ಕಾರಿ ಶಾಲೆಯಿಂದ ಡ್ರಾಪ್ ಔಟ್ ಆದ ಮಕ್ಕಳೆ ಸಿಗುತ್ತಾರೆ. ಸರ್ಕಾರಿ ಶಾಲೆಯಲ್ಲಿ ಪ್ರವೇಶಾತಿ ಪಡೆದು ಅಲ್ಲಿ ಗೈರಾಗಿ ಕೋಚಿಂಗ್ ಸೆಂಟರ್ ಸೇರಿಕೊಳ್ಳುತ್ತಾರೆ. ಹಾಸ್ಟೆಲ್ ನಲ್ಲಿ ಮಕ್ಕಳ ಪ್ರವೇಶಾತಿಗೂ ಬಯೋ ಮೆಟ್ರಿಕ್ ಹಾಜರಾತಿಯಲ್ಲಿಯೂ ತುಂಬಾ ವ್ಯತ್ಯಾಸ ಕಂಡುಬರುತ್ತಿದೆ. ಹಾಗಾದರೆ

ಮಕ್ಕಳು ಎಲ್ಲಿ ಹೋಗುತ್ತಾರೆ? ಏನು ಮಾಡುತ್ತಾರೆ? ಎಂಬುದನ್ನು ಪೋಷಕರಾದವರು ನಾವು ಅವಲೋಕನ ಮಾಡಬೇಕಿದೆ ಎಂದರು.

ನಂತರ ನಡೆದ ಮಧ್ಯಾಹ್ನ ಅವಧಿಯ ಸೆಷನ್ಸ್‌ನಲ್ಲಿ ಬೆಂಗಳೂರು ಸಿ.ಐ.ಡಿ.ಯ ಎಸ್.ಜೆ.ಪಿ.ಯು ರೋಹಿತ್ ಸಿ.ಜಿ ಅವರು ಪೋಕೋ ಕಾಯ್ದೆ, ಬಾಲ ನ್ಯಾಯ ಕಾಯ್ದೆ, ಮಕ್ಕಳ ಭಿಕ್ಷಾಟನೆ, ಅನಧಿಕೃತ ಕೋಚಿಂಗ್ ಸೆಂಟರ್ ಗಳ ಕುರಿತು ಉಪನ್ಯಾಸ ನೀಡಿದರು. ಕಲಬುರಗಿ ದಕ್ಷಿಣ ವಲಯದ ಸಿ.ಆರ್.ಸಿ ಪ್ರಕಾಶ ರಾಠೋಡ ಅವರು ಶಾಲೆಯಿಂದ ಹೊರಗುಳಿದ ಮಕ್ಕಳು ಮತ್ತು ಆ‌ರ್.ಟಿ.ಇ ಕಾಯ್ದೆ ವಿಷಯದ ಕುರಿತು ಮಾತನಾಡಿದರು.

ಕಾರ್ಯಾಗಾರದಲ್ಲಿ ಆಯೋಗದ ಸದಸ್ಯ ಕಾರ್ಯದರ್ಶಿ ವಾಸಂತಿ ಉಪ್ಪಾರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವಿಶ್ವರಾಧ್ಯ ಕೆ. ಇಜೇರಿ, ಗುಲಬರ್ಗಾ ವಿ.ವಿ. ಕುಲಸಚಿವ ಪ್ರೊ. ರಮೇಶ ಲಂಡನಕರ್, ನಗರ ಪೊಲೀಸ್ ಉತ್ತರ ವಿಭಾಗದ ಎ.ಸಿ.ಪಿ ಚಂದ್ರಶೇಖರ, ರಾಯಚೂರು ಉಪನಿರ್ದೇಶಕ ನವೀನ್ ಯು. ಸೇರಿದಂತೆ ಕಲಬುರಗಿ ವಿಭಾಗದ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಮಕ್ಕಳ ಸಂಬಂಧಿತ ಇಲಾಖೆ ಮತ್ತು ಸಂಸ್ಥೆಗಳ ಸುಮಾರು 300 ಜನ ಪ್ರತಿನಿಧಿಗಳು ಭಾಗವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ ಅವರು ಸ್ವಾಗತಿಸಿದರು.

Share This Article

Facebook
X
WhatsApp
Telegram

Leave a Reply

Your email address will not be published. Required fields are marked *

Cricket Live

Stock Market

Astrology

Gold & Silver Price